ಶಿಕ್ಷಣ

ಉಡುಪಿ ಜಿಲ್ಲಾ ಪ.ಪೂ ಕಾಲೇಜುಗಳ ಸಂಖ್ಯಾಶಾಸ್ತ್ರ ಉಪನ್ಯಾಸಕರ ಕಾರ್ಯಗಾರ         

“ಆಧುನಿಕ ಜಗತ್ತಿನ ಯುವ ಜನತೆಯ ಔದ್ಯೋಗಿಕ ಆಶಾಕಿರಣ ಸಂಖ್ಯಾಶಾಸ್ತ್ರ”

Views: 1

ಉಡುಪಿ ಮಹಾತ್ಮಾ ಗಾಂಧಿ ಮೆಮೊರಿಯಲ್ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪದವಿ ಪೂರ್ವ ಶಿಕ್ಷಣ ವಿಭಾಗ, ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು ಸಂಖ್ಯಾಶಾಸ್ತ್ರ ಉಪನ್ಯಾಸಕರ ವೇದಿಕೆಯ ಸಹಯೋಗದಲ್ಲಿ ಉಪನ್ಯಾಸಕರಿಗಾಗಿ ಒಂದು ದಿನದ ಕಾರ್ಯಾಗಾರ ನಡೆಯಿತು.

ಉಡುಪಿ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಮಾರುತಿ ಅವರು ಕಾರ್ಯಗಾರ ಉದ್ಘಾಟಿಸಿ, ಮಾತನಾಡಿ, ‘ಒಂದು ದೇಶದ ಪ್ರಗತಿಯನ್ನು ಗುರುತಿಸಲು,ಜನಸಂಖ್ಯಾ ಅಭಿವೃದ್ಧಿ ಸೂಚ್ಯಂಕ ಅರಿಯಲು, ಆರ್ಥಿಕ-ಸಾಮಾಜಿಕ ಕ್ಷೇತ್ರಗಳ ಚಲನೆಯನ್ನು ಗುರುತಿಸಲು, ಕೃಷಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ, ಮುಂತಾದ ಎಲ್ಲಾ ಕ್ಷೇತ್ರಗಳ ಪ್ರಗತಿಯ ಹಿನ್ನೋಟ, ಮುನ್ನೋಟಗಳ ದತ್ತಾಂಶಗಳ ಸಂಗ್ರಹ, ವಿಶ್ಲೇಷಣೆ ಮಾಡುವಲ್ಲಿ ಸಂಖ್ಯಾಶಾಸ್ತ್ರವೇ ಆಧಾರ. ಜೊತೆಗೆ ಪ್ರಸ್ತುತ ಜಗತ್ತಿನ ಯುವ ಜನತೆಯ ಔದ್ಯೋಗಿಕ ಆಶಾಕಿರಣವೇ ಸಂಖ್ಯಾಶಾಸ್ತ್ರ’ ಎಂದರು.

ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಪದವಿ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಲಕ್ಷ್ಮೀನಾರಾಯಣ ಕಾರಂತ ಅವರು ಮಾತನಾಡಿ, ‘ಸಂಖ್ಯಾಶಾಸ್ತ್ರ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಅರ್ಥಶಾಸ್ತ್ರ, ಬಯೋಮೆಟ್ರಿಕ್ಸ್ ಮುಂತಾದ ಕ್ಷೇತ್ರಗಳಿಗೆ ಅಡಿಪಾಯವಾಗಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ, ಮಹಾತ್ಮಾ ಗಾಂಧಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಮಾಲತಿ ದೇವಿ ಮಾತನಾಡಿ, ‘ಇಂದು ಪದವಿ ಪೂರ್ವ ಹಂತಗಳಲ್ಲಿ ಸಂಖ್ಯಾಶಾಸ್ತ್ರಕ್ಕೆ ವಿದ್ಯಾರ್ಥಿಗಳ ಪ್ರವೇಶ ವೃದ್ಧಿಸಬೇಕು. ಅಲ್ಲದೆ ಸರಕಾರಿ ಕಾಲೇಜುಗಳಲ್ಲಿ ಸಂಖ್ಯಾಶಾಸ್ತ್ರ ವಿಷಯ ಸಂಯೋಜನೆ, ಉಪನ್ಯಾಸಕರು ಇಲ್ಲದೇ ಇರುವುದು ವಿಪರ್ಯಾಸದ ಸಂಗತಿ, ಈ ಕುರಿತು ಉಪನ್ಯಾಸಕರು, ಸಂಘಟನೆಗಳು ಸರಕಾರದ ಗಮನ ಸೆಳೆಯಬೇಕು ಎಂದರು.

ಉಡುಪಿ ಜಿಲ್ಲೆಯ ಸಂಖ್ಯಾಶಾಸ್ತ್ರ ಉಪನ್ಯಾಸಕರಾದ ಶ್ರೀ ಪ್ರಭಾಕರ ಶೆಟ್ಟಿಗಾರ ಅವರು ಅತಿಥಿ ಉಪನ್ಯಾಸ ನೀಡುತ್ತಾ, ಇಲಾಖೆಯು ಈ ವರ್ಷದಿಂದ ಬದಲಾವಣೆ ಮಾಡಿದ ಸಂಖ್ಯಾಶಾಸ್ತ್ರ ವಿಷಯದ ಪ್ರಶ್ನೆಪತ್ರಿಕೆಯ ನೀಲನಕ್ಷೆ, ಪ್ರಶ್ನೆಪತ್ರಿಕೆಯ ರಚನೆ ಹಾಗೂ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ಧಗೊಳಿಸುವ ವಿಧಾನವನ್ನು ತಿಳಿಸಿಕೊಟ್ಟರು.

ಸಂಖ್ಯಾಶಾಸ್ತ್ರ ಉಪನ್ಯಾಸಕರ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಪ್ರತಿಮಾ ಬಾಳಿಗಾ ಸ್ವಾಗತಿಸಿದರು. ಶ್ರೀಮತಿ ಸ್ವಾತಿ ನಿರೂಪಿಸಿದರು.

2023-24ನೇ ಶೈಕ್ಷಣಿಕ ಸಾಲಿನ ವೇದಿಕೆಯ ನೂತನ ಪದಾಧಿಕಾರಿಗಳನ್ನಾಗಿ ಪ್ರಭಾಕರ ಶೆಟ್ಟಿಗಾರ, ನೇತ್ರಾವತಿ ಬುಡ್ಡಿ, ಈಶ್ವರ್‌, ನಯನಾ ಲೋಬೋ, ಪವನ್‌ ಕುಮಾರ್‌ ಅವರುಗಳನ್ನು ಆಯ್ಕೆ ಮಾಡಲಾಯಿತು.

Related Articles

Back to top button