ಉಡುಪಿ:ಆನ್‌ಲೈನ್ ಶಾಪಿಂಗ್ ಹೆಸರಿನಲ್ಲಿ ಹ್ಯಾಂಡ್ ಬ್ಯಾಗ್ ಆಸೆಗೆ 9 ಲಕ್ಷ ಕಳೆದುಕೊಂಡ ಮಹಿಳೆ
Views: 45
ಕನ್ನಡ ಕರಾವಳಿ ಸುದ್ದಿ: ಉಡುಪಿಯ ಸಂತೆ ಕಟ್ಟೆ ನಿವಾಸಿಯೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಕೇವಲ ರೂ.899 ರ ಹ್ಯಾಂಡ್‌ಬ್ಯಾಗ್ ಖರೀದಿಸಲು ಮುಂದಾಗಿ ಸೈಬರ್ ವಂಚಕರಿಂದ ಬರೋಬ್ಬರಿ ರೂ.9 ಲಕ್ಷ ಕಳೆದುಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ‘bagvogue.co__’ ಹೆಸರಿನ ಖಾತೆಯಲ್ಲಿ ಬ್ಯಾಗ್‌ಗಳ ಜಾಹೀರಾತು ನೋಡಿ ಮಹಿಳೆ ಸಂಪರ್ಕಿಸಿದ್ದಾರೆ. ಬ್ಯಾಗ್‌ನ ಬೆಲೆ ಕೇವಲ 899 ರೂ. ಹಾಗೂ ಡೆಲಿವರಿ ಶುಲ್ಕ 1,950 ರೂ. ಎಂದು ನಂಬಿಸಲಾಗಿದೆ. ವಂಚಕರು ವಾಟ್ಸಾಪ್ ಮೂಲಕ ಕ್ಯೂಆರ್ (QR) ಕೋಡ್ ಕಳುಹಿಸಿದ್ದು, ಮಹಿಳೆ 2,849 ರೂ.ಗಳನ್ನು ಗೂಗಲ್ ಪೇ ಮೂಲಕ ಪಾವತಿಸಿದ್ದಾರೆ. ಹಣ ಪಾವತಿಯಾದ ನಂತರ, ಬೇರೆ ಬೇರೆ ನೆಪಗಳನ್ನು ಹೇಳಿ ಆ ಹಣವನ್ನು ಮರುಪಾವತಿಸುವುದಾಗಿ ನಂಬಿಸಿ ಮಹಿಳೆಯಿಂದ ಮತ್ತು ಅವರ ತಾಯಿಯ ಬ್ಯಾಂಕ್ ಖಾತೆಗಳಿಂದಲೂ ಹಂತ ಹಂತವಾಗಿ ಹಣವನ್ನು ವರ್ಗಾಯಿಸಿಕೊಳ್ಳಲಾಗಿದೆ.
ಕೊನೆಗೂ ಬ್ಯಾಗ್ ಸಿಗದೆ ಮತ್ತು ಹಣವೂ ವಾಪಸ್ ಬಾರದೆ, ಮಹಿಳೆಯರು ಒಟ್ಟು 9,00,442 ರೂ. ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ.ಈ ಕುರಿತು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆ ಮತ್ತು ಬಿಎನ್ಎಸ್ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.






