ರಾಜಕೀಯ

ಅಜಿತ್‌ ಪವಾರ್ ಉತ್ತರಾಧಿಕಾರಿಯಾಗಿ ಪತ್ನಿ ಸುನೇತ್ರಾ ಪವಾರ್ ಸಾಧ್ಯತೆ

Views: 32

ಕನ್ನಡ ಕರಾವಳಿ ಸುದ್ದಿ: ಪುಣೆ ಜಿಲ್ಲೆಯ ಬಾರಾಮತಿ ಕ್ಷೇತ್ರದಲ್ಲಿ ಬುಧವಾರ ಬೆಳಗ್ಗೆ  ವಿಮಾನ ಪತನವಾಗಿ ಸ್ಫೋಟಗೊಂಡಿದ್ದರಿಂದ ಮಹಾ ರಾಷ್ಟ್ರ ಉಪ ಮುಖ್ಯಮಂತ್ರಿ, ಎನ್ ಸಿಪಿ(ಅಜಿತ್ ಬಣ) ನಾಯಕ ಅಜಿತ್ ಪವಾರ್ ಹಠಾತ್ ನಿರ್ಗಮಿಸಿದ್ದರಿಂದ ಈಗ ಪಕ್ಷದ ಜವಾಬ್ದಾರಿ, ಸರಕಾರದ ಮಟ್ಟದಲ್ಲಿ ಎನ್‌ಸಿಪಿ ಪಾಲುದಾರಿಕೆಯ ನೇತೃತ್ವ ವಹಿಸಿಕೊಳ್ಳುವವರು ಯಾರು? ಎಂಬ ಪ್ರಶ್ನೆ ಎದುರಾಗಿದೆ.

ಲಭ್ಯ ಮಾಹಿತಿಗಳ ಪ್ರಕಾರ, ಅಜಿತ್ ಪವಾರ್ ಅವರ ಪತ್ನಿ, ರಾಜ್ಯಸಭಾ ಸದಸ್ಯೆ ಸುನೇತ್ರಾ ಪವಾರ್ ಅವರೇ ಸದ್ಯ ಎನ್ ಸಿಪಿ(ಅಜಿತ್ ಬಣ)ದ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಅಜಿತ್ ಪವಾರ್ ಅವರ ಉತ್ತರಾಧಿಕಾರಿ ಆಗುವುದರಲ್ಲಿ ಪುತ್ರ ಪಾರ್ಥ್ ಪವಾರ್ ಮುಂದಿನ ಸಾಲಿನಲ್ಲಿದ್ದಾರೆ. ಇನ್ನೊಂದೆಡೆ, ಸೋದರ ಸಂಬಂಧಿ ರೋಹಿತ್ ಪವಾರ್ ಕೂಡಾ ನಾಯಕತ್ವ ಸ್ಥಾನ ಬಯಸಬಹುದಾಗಿದೆ. ಆದರೆ, ಈ ಸಂಘರ್ಷವನ್ನು ತಪ್ಪಿಸುವ ಸಲುವಾಗಿ ಸದ್ಯಕ್ಕೆ ಸುನೇತ್ರಾ ಅವರನ್ನೇ ಪಕ್ಷ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೇ, ರಾಜ್ಯಸಭೆ ಸದಸ್ಯೆಯಾಗಿ, ರಾಜಕೀಯವಾಗಿ ತಮ್ಮದೇ ಆದ ಛಾಪು ಮೂಡಿಸಿರುವ, ರಾಜಕೀಯ ಸಂಪರ್ಕಗಳನ್ನು ಬೆಳೆಸಿಕೊಂಡಿರುವ ಸುನೇತ್ರಾ ಅವರಿಗೆ ನಾಯಕತ್ವದ ಹೊಣೆ ಸಿಗುವ ಅವಕಾಶಗಳು ಹೆಚ್ಚಿನದಾಗಿವೆ ಎಂಬುದು ಪಕ್ಷದ ವಲಯದ ಮಾತಾಗಿದೆ.

ಆದರೆ, ಸರಕಾರದ ಮಟ್ಟದಲ್ಲಿ ಪತಿ ಹೊಂದಿದ್ದ ಉಪ ಮುಖ್ಯಮಂತ್ರಿ ಸ್ಥಾನವನ್ನು ಸುನೇತ್ರಾ ಅವರು ಪಡೆಯುತ್ತಾರೆಯೇ? ಎಂಬುದಕ್ಕೆ ಉತ್ತರ ಇನ್ನಷ್ಟೇ ತಿಳಿದುಬರಬೇಕಿದೆ.

ಸುನೇತ್ರಾ ರಾಜಕೀಯ ಹಿನ್ನೆಲೆ

ಮೂಲತಃ ಮರಾಠವಾಡ ಪ್ರದೇಶದ ಧರಾಶಿವ್‌ನಿಂದ ಬಂದಿರುವ ಸುನೇತ್ರಾ ಅವರು ಕೃಷಿ ಹಿನ್ನೆಲೆಯ ರಾಜಕೀಯ ಕುಟುಂಬದಿಂದ ಬಂದವರು. ರಾಜ್ಯದ ಮಾಜಿ ಸಚಿವ, ಹಾಲಿ ಸಂಸದ ಪದಮ್ ಸಿಂಹ ಪಾಟೀಲ್ ಅವರ ಸಹೋದರಿ ಸುನೇತ್ರಾ ರಾಜಕಾರಣಿಯಾಗಿಯಷ್ಟೇ ಅಲ್ಲದೆ, ಸಮಾಜ ಸೇವಕಿ, ಉದ್ಯಮಿ ಮತ್ತು ಶಿಕ್ಷಣ ಸಂಸ್ಥೆಗಳ ನಿರ್ವಾಹಕಿಯಾ ಗಿಯೂ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ವಿರುದ್ಧ ಬಾರಾಮತಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತ ಸುನೇತ್ರಾ ನಂತರ ರಾಜ್ಯಸಭೆ ಸದಸ್ಯೆಯಾದರು.

 

Related Articles

Back to top button
error: Content is protected !!