ಹನಿಮೂನ್ ಭೀಕರ ಹತ್ಯೆ: ಬೆಟ್ಟ ಹತ್ತುವಾಗ ದಣಿದಂತೆ ನಟಿಸಿ ಗಂಡನ ಹತ್ಯೆಗೆ 20 ಲಕ್ಷ ರೂ. ಆಮಿಷ ಒಡ್ಡಿದ್ದ ಪತ್ನಿ!

Views: 243
ಕನ್ನಡ ಕರಾವಳಿ ಸುದ್ದಿ: ಹನಿಮೂನ್‌ಗಾಗಿ ಮೇಘಾಲಯಕ್ಕೆ ತೆರಳಿ ನಾಪತ್ತೆಯಾದ ಮಧ್ಯ ಪ್ರದೇಶದ ಇಂದೋರ್ ಮೂಲದ ರಾಜ ರಘುವಂಶಿಯನ್ನು ಆತನ ಪತ್ನಿ ಸೋನಂ ರಘುವಂಶಿ ಹತ್ಯೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
ಸೋನಂ ತನ್ನ ಪ್ರಿಯಕರ ಮಧ್ಯ ಪ್ರದೇಶದ ರಾಜ್ ಕುಶ್ವಾಹಾ ಜತೆಗೂಡಿ ರಾಜ ರಘುವಂಶಿಯನ್ನು ಹತ್ಯೆ ಮಾಡಿದ್ದಾಳೆ. ಇದಕ್ಕಾಗಿ ಇವರಿಬ್ಬರು ಸೇರಿ ರಾಜ ಕುಶ್ವಾಹಾನ ಮೂವರು ಗೆಳೆಯರಿಗೆ ಹತ್ಯೆಯ ಸುಪಾರಿ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.
ರಾಜ ರಘುವಂಶಿ ಮತ್ತು ಸೋನಂ ಮದುವೆಯಾದ 5 ದಿನಗಳ ನಂತರ ರಾಜ್ ಕುಶ್ವಾಹಾ ತನ್ನ ಬಾಲ್ಯದ ಗೆಳೆಯರಾದ ಆನಂದ್ ಕುಮ್ರಿ (23), ಆಕಾಶ್ ರಾಜಪೂತ್ (19) ಮತ್ತು ವಿಶಾಲ್ ಸಿಂಗ್ ಚೌಹಾಣ್ (22)ನನ್ನು ಮಧ್ಯ ಪ್ರದೇಶದ ಇಂದೋರ್‌ನಲ್ಲಿರುವ ಕೆಫೆಯೊಂದಕ್ಕೆ ಕರೆಸಿ ಸುಪಾರಿ ನೀಡಿದ್ದ ಎನ್ನುವುದು ತನಿಖೆಯ ವೇಳೆ ತಿಳಿದು ಬಂದಿದೆ.
ಇನ್ನು ತನ್ನ ಪತಿ ರಾಜ ರಘುವಂಶಿ ಹತ್ಯೆಗೆ ಸೋನಂ ಬಾಡಿಗೆ ಹಂತಕರಿಗೆ ಆರಂಭದಲ್ಲಿ 4 ಲಕ್ಷ ರೂ. ನೀಡುವುದಾಗಿ ಹೇಳಿದ್ದಳು. ನಂತರ ಆ ಮೊತ್ತವನ್ನು 20 ಲಕ್ಷ ರೂ.ಗೆ ಹೆಚ್ಚಿಸಿದ್ದಳು ಎಂದು ಮೂಲಗಳು ಹೇಳಿವೆ.
ಹನಿಮೂನ್ ಘಟನೆ ಹಿನ್ನೆಲೆ
ಮೇ 13ರಂದು ಮದುವೆಯಾದ ರಾಜ ರಘುವಂಶಿ ಮತ್ತು ಸೋನಂ ಮೇ 20ರಂದು ಹನಿಮೂನ್‌ಗಾಗಿ ಮೇಘಾಲಯಕ್ಕೆ ತೆರಳಿದ್ದರು. ಇವರನ್ನು ಮೂವರು ಹಂತಕರು ಹಿಂಬಾಲಿಸಿದ್ದರು. ಹಂತಕರು ಶಿಲ್ಲಾಂಗ್‌ನಲ್ಲಿ ಸೋನಂ ಮತ್ತು ರಾಜ ರಘುವಂಶಿ ಅವರ ಹೋಂಸ್ಟೇ ಬಳಿಯ ಹೋಟೆಲ್‌ನಲ್ಲಿ ತಂಗಿದ್ದರು. ದಂಪತಿ 3 ಮೂರು ದಿನಗಳ ಕಾಲ ಪ್ರವಾಸಿ ತಾಣಗಳಲ್ಲಿ ಸುತ್ತಾಡಿದ್ದರು. ಮೇ 23ರಂದು ಸೋನಂ ಫೋಟೋಶೂಟ್ ನೆಪದಲ್ಲಿ ರಾಜ ಅವರನ್ನು ಗುಡ್ಡಗಾಡು ಪ್ರದೇಶಕ್ಕೆ ಕರೆದೊಯ್ದಿದ್ದಳು. ಇದೇ ವೇಳೆ ಮೂವರು ಹಂತಕರು ಅವರನ್ನು ಕೂಡಿಕೊಂಡಿದ್ದರು. ಮೂವರು ರಾಜ ಅವರನ್ನು ಮಾತನಾಡಿಸಿ ಜತೆಗೆ ಹೆಜ್ಜೆ ಹಾಕಿದ್ದರು. ಬೆಟ್ಟ ಹತ್ತುವಾಗ ಸೋನಂ ದಣಿದಂತೆ ನಟಿಸಿ ತನ್ನ ಪತಿಯನ್ನು ಕೊಲೆಗಾರರ ಜತೆಗೆ ಬಿಟ್ಟು ಹಿಂದೆ ಉಳಿದಿದ್ದಳು.
ನಿರ್ಜನ ಪ್ರದೇಶ ತಲುಪುತ್ತಿದ್ದಂತೆ ಸೋನಂ ಪತಿಯನ್ನು ಹತ್ಯೆಗೈಯಲು ಸೂಚನೆ ನೀಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ ಸೋನಂ ಪ್ರೇಮಿ ರಾಜ್ ಮೇಘಾಲಯದಲ್ಲಿ ಇರಲೇ ಇಲ್ಲ. ಆದರೆ ತೆರೆಮರೆಯಲ್ಲಿ ನಿಂತು ಹತ್ಯೆಯ ಸಂಚು ರೂಪಿಸಿದ್ದ. ಮಾತ್ರವಲ್ಲ ಸೋನಂ ಜತೆಗೆ ನಿರಂತರ ಸಂಪರ್ಕದಲ್ಲಿದ್ದ ಎನ್ನುವ ವಿಚಾರವೂ ತನಿಖೆ ವೇಳೆ ಬಯಲಾಗಿದೆ. ಈಗಾಗಲೇ ಮೊದಲ ಆರೋಪಿ ಆಕಾಶ್ ರಾಜಪೂತ್‌ನನ್ನು ಉತ್ತರ ಪ್ರದೇಶದ ಲಲಿತ್ಪುರದಲ್ಲಿ ಬಂಧಿಸಲಾಗಿದೆ.