ಸಾಲ ವಾಪಸ್ ಮಾಡಲು ವಿಳಂಬವಾಗಿದ್ದಕ್ಕೆ ಅಪ್ರಾಪ್ತೆಯನ್ನು ಬಲವಂತವಾಗಿ ಮದುವೆಯಾದ!

Views: 146
ಕನ್ನಡ ಕರಾವಳಿ ಸುದ್ದಿ, : 50 ಸಾವಿರ ರೂ. ಸಾಲವನ್ನು ವಾಪಸ್ ಕೊಡಲಿಲ್ಲ ಎಂಬ ಕಾರಣಕ್ಕೆ ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ವಿವಾಹವಾಗಿರುವ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿಯ ಗ್ರಾಮವೊಂದರಲ್ಲಿ ನಡೆದಿದೆ.
ಘಟನೆಯ ಬಗ್ಗೆ ಸಂತ್ರಸ್ತ ಬಾಲಕಿ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಆರೋಪಿ ವಿಶಾಲ್ ಡವಳಿ, ಯುವಕನ ತಾಯಿ ರೇಖಾ ಡವಳಿ, ತಂದೆ ಪುಂಡಳಿಕ ಡವಳಿ, ಸಹೋದರ ಶ್ಯಾಮ ಡವಳಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸವದತ್ತಿ ತಾಲೂಕಿನ ಗ್ರಾಮವೊಂದರ ಸಂತ್ರಸ್ತೆಯ ಕುಟುಂಬಸ್ಥರು ಬಡವರಾಗಿದ್ದು, ಆಕೆಯ ಚಿಕ್ಕಪ್ಪ ಹಾಗೂ ತಾಯಿ ಅನಗೋಳದಲ್ಲಿ ವಾಚ್‌ಮನ್ ಆಗಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇತ್ತೀಚೆಗೆ ಬಾಲಕಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಆಕೆಯ ಅತ್ತಿಗೆಗೆ ಹೆರಿಗೆಯ ಚಿಕಿತ್ಸೆಗೂ ಹಣದ ಕೊರತೆಯಿತ್ತು. ಹೀಗಾಗಿ ಕುಟುಂಬ ಆರೋಪಿ ವಿಶಾಲ್ ಡವಳಿ ಕುಟುಂಬಸ್ಥರ ಬಳಿ ಕಿವಿ ಓಲೆಯನ್ನು ಅಡ ಇಟ್ಟು 50 ಸಾವಿರ ರೂ. ಸಾಲ ಪಡೆದಿದ್ದರು.
ಆದರೆ ಹಣವನ್ನು ವಾಪಸ್ ಮಾಡಲು ವಿಳಂಬವಾಗಿದ್ದಕ್ಕೆ ವಿಶಾಲ್ ಕುಟುಂಬಸ್ಥರು ಬಾಲಕಿಯನ್ನು ವಿವಾಹ ಮಾಡಿ ಕೊಡುವಂತೆ ಪಟ್ಟು ಹಿಡಿದಿದ್ದರು. ಇದಕ್ಕೆ ಬಾಲಕಿಯ ಪೋಷಕರು ಒಪ್ಪದಿದ್ದರೂ 2024ರ ಸೆಪ್ಟೆಂಬರ್ 18 ರಂದು ಬಾಲಕಿಯನ್ನು ಬಲವಂತವಾಗಿ ಕರೆದುಕೊಂಡು ಹೋಗಿ ವಿಶಾಲ್‌ನೊಂದಿಗೆ ಮದುವೆ ಮಾಡಿಸಿದ್ದಾರೆ.
ಮದುವೆಯ ಬಳಿಕ ಬಾಲಕಿಗೆ ನಿರಂತರ ಲೈಂಗಿಕ ಕಿರುಕುಳ ಹಾಗೂ ಬಲವಂತ ದೈಹಿಕ ಸಂಪರ್ಕ ಮಾಡಿದ್ದಾರೆ ಎಂದು ಬಾಲಕಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.