ಶಿಕ್ಷಣ

ಶಾಲಾ ವಾಹನಗಳಿಗೆ ನಕಲಿ ವಿಮೆ ಮಾಡಿ ವಂಚನೆ – ಇಬ್ಬರು ಆರೋಪಿಗಳ ಬಂಧನ

Views: 167

ಕನ್ನಡ ಕರಾವಳಿ ಸುದ್ದಿ: ಶೈಕ್ಷಣಿಕ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಅಲ್ಲಿನ ವಾಹನಗಳ ವಿಮೆ ಪಾಲಿಸಿ ಮಾಡಿಸುವುದಾಗಿ ಹಣ ಪಡೆದು, ನಕಲಿ ವಿಮೆ ಮಾಡಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.

ರಾಕೇಶ ಎಸ್‌ (33) ಮತ್ತು ಚರಣ ಬಾಬು ಮೇಸ್ತ ಬಂಧಿತ ಆರೋಪಿಗಳು

2024ರಲ್ಲಿ ಕುಂದಾಪುರ ತಾಲೂಕು ಹೊಂಬಾಡಿ – ಮಂಡಾಡಿ ಗ್ರಾಮದ ಹುಣ್ಸೆಮಕ್ಕಿಶಾಲಾ ವಾಹನ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ಕುರಿತು ಕುಂದಾಪುರ ಸೆಷನ್ಸ್‌ ನ್ಯಾಯಾಲಯದ ವಿಚಾರಣೆ ನಡೆದಾಗ ರಿಕ್ಷಾದ ಚಾಲಕರಾದ ಉದಯ ಶೆಟ್ಟಿ ಅವರು 15,95,000 ರೂಪಾಯಿ ವಿಮಾ ಪರಿಹಾರವಾಗಿ ನೀಡುವಂತೆ ನ್ಯಾಯಾಲಯಕ್ಕೆ ಕೋರಿಕೊಂಡಿದ್ದರು. ಈ ವೇಳೆ ವಿಮಾ ಕಂಪೆನಿಯವರು ಶಾಲಾ ಬಸ್‌ ವಿಮಾ ಪಾಲಿಸಿ ಪರಿಶೀಲಿಸಿದಾಗ, ನಕಲಿ ವಿಮಾ ಪಾಲಿಸಿಯಾಗಿರುವುದು ಪತ್ತೆಯಾಗಿತ್ತು.

ಈ ಹಿನ್ನಲೆಯಲ್ಲಿ ರಿಲಯನ್ಸ್‌ ಜನರಲ್‌ ಇನ್ಯೂರೆನ್ಸ್‌ ಕಂಪೆನಿಯ ಮೇನೇಜರ್‌ ನಿಖಿಲ್‌ ಜಿ.ಆರ್‌ ಅವರು ಆರೋಪಿಯ ವಿರುದ್ಧ ನಕಲಿ ವಿಮಾ ಪಾಲಿಸಿಯನ್ನು ಸೃಷ್ಟಿಸಿ ಠಾಣೆಗೆ ಹಾಗೂ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಈ ಮೂಲಕ ವಿಮಾ ಕಂಪೆನಿಗೆ ಮೋಸ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದರು.

ಪ್ರಕರಣದ ಬೆನ್ನು ಹತ್ತಿದ ಕೋಟ ಪೊಲೀಸ್‌ ಠಾಣೆಯ ಉಪನಿರೀಕ್ಷಕರಾದ ಪ್ರವೀಣ ಕುಮಾರ್‌ ಆರ್ ಮತ್ತು ತಂಡ ವಿಶೇಷ ತಂಡವನ್ನು ರಚಿಸಿ, ಮೊದಲು ಪಾಂಡೇಶ್ವರ ಮೂಲದ ಆರೋಪಿ ರಾಕೇಶ ಎಸ್‌ ನನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ.

ವಿಚಾರಣೆಯ ವೇಳೆ ಆರೋಪಿಯು, ರಿಲಾಯನ್ಸ್‌ ಜನರಲ್‌ ಇನ್ಸೂರೆನ್ಸ್‌ ಕಂಪೆನಿಯಲ್ಲಿ ಎಸ್‌ಡಿಓ ಚರಣ ಬಾಬು ಮೇಸ್ತ ಹೆಸರು ಬಾಯಿ ಬಿಟ್ಟಿದ್ದು, ಇಬ್ಬರು ಸೇರಿ ಕೃತ್ಯ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾನೆ.

ಚರಣ ಬಾಬು ಮೇಸ್ತ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳು ಭಟ್ಕಳ ಹಾಗೂ ಉಡುಪಿ ಕಡೆಗಳಲ್ಲಿಯ ಖಾಸಗಿ/ಅನುದಾನಿತ ಶಾಲಾ ಕಾಲೇಜಿನಲ್ಲಿ ಶಾಲಾ ಬಸ್ಸಿನ ವಿಮೆ ಮಾಡಿಸುವುದಾಗಿ ಹಣ ಪಡೆದು ಇದೇ ರೀತಿಯ ಕೃತ್ಯವೆಸಗಿರುವುದಾಗಿ ತಿಳಿಸಿದ್ದಾನೆ. ಇವರು ರಿಲಾಯನ್ಸ್‌ ಜನರಲ್‌ ಇನ್ಸೂರೆನ್ಸ್‌ ಕಂಪೆನಿಯ ಹಳೆ ಪಾಲಿಸಿಗಳನ್ನು ಪಿಡಿಎಫ್ ಪೈಲ್‌ ಸಿದ್ಧಪಡಿಸಿ ಪಿಡಿಎಫ್‌ ಎಡಿಟರ್‌ ಮೂಲಕ ವಿಮೆ ಪಾಲಿಸಿಯ ವಿಮೆ ನಂಬ್ರ, ದಿನಾಂಕ, ವಾಹನದ ನಂಬ್ರ ಮತ್ತು ವಿಮೆ ಮೊತ್ತದ ಹಣವನ್ನು ತಮಗೆ ಬೇಕಾದ ರೀತಿಯಲ್ಲಿ ತಿದ್ದುಪಡಿ ಮಾಡಿ ನಕಲಿ ವಿಮೆ ಪಾಲಿಸಿ ಮಾಡಿ ಶೈಕ್ಷಣಿಕ ಸಂಸ್ಥೆಗಳಿಗೆ ಮೋಸ ಮಾಡುತ್ತಿರುವುದು ತನಿಖೆಯಲ್ಲಿ ಹೊರಬಿದ್ದಿದೆ. ಆರೋಪಿಗಳು ಉತ್ತರ ಕನ್ನಡ ಜಿಲ್ಲೆ ಭಟ್ಕಳ, ಉಡುಪಿ ಜಿಲ್ಲೆಯ ಕುಂದಾಪುರ, ಕೋಟ ಠಾಣಾ ವ್ಯಾಪ್ತಿಯಲ್ಲಿರುವ ಶಾಲೆ / ಕಾಲೇಜಿನ ಶಾಲಾ ಬಸ್ಸಿಗೆ ವಿಮೆ ಸೇರಿ ಸುಮಾರು 86 ಪಾಲಿಸಿಗಳಲ್ಲಿ 29 ಪಾಲಿಸಿ ನಕಲಿ ಹಾಗೂ ಚರಣ ಬಾಬು ಮೇಸ್ತ ಒಬ್ಬನೇ 111 ಪಾಲಿಸಿಯಲ್ಲಿ 17 ನಕಲಿ ಪಾಲಿಸಿ ಮಾಡಿ ಒಟ್ಟು 46 ಶಾಲೆ/ಕಾಲೇಜ್‌ ವಾಹನಗಳ ವಿಮೆಯನ್ನು ನಕಲಿ ಮಾಡಿರುವುದು ತನಿಖೆ ಪತ್ತೆಯಾಗಿದೆ.

Related Articles

Back to top button