ಸಾಂಸ್ಕೃತಿಕ

ವಿಭಿನ್ನ ವರ್ತನೆ ಮತ್ತು ವಿವಾದಗಳಿಂದಲೇ ಗಮನ ಸೆಳೆದ ರೀಲ್ಸ್‌ ರಾಣಿ ಸೋನು ಗೌಡ ಪರಪ್ಪನ ಅಗ್ರಹಾರ ಜೈಲಿಗೆ

Views: 111

ಬೆಂಗಳೂರು: ರಾಯಚೂರು ಮೂಲದ ಬಡ ಕುಟುಂಬಕ್ಕೆ ಸೇರಿದ ಏಳು ವರ್ಷದ ಬಾಲಕಿಯನ್ನು ಅಕ್ರಮವಾಗಿ ದತ್ತು ಪಡೆದ ಅರೋಪದಲ್ಲಿ ಬಂಧನಕ್ಕೆ ಒಳಗಾದ ಬಿಗ್‌ ಬಾಸ್‌ ಖ್ಯಾತಿಯ ರೀಲ್ಸ್‌ ರಾಣಿ ಸೋನು ಶ್ರೀನಿವಾಸ ಗೌಡಳನ್ನು ಕೋರ್ಟ್‌ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ಮೂಲಕ ತನ್ನ ವಿಭಿನ್ನ ವರ್ತನೆ ಮತ್ತು ವಿವಾದಗಳಿಂದಲೇ ಗಮನ ಸೆಳೆದ ರೀಲ್ಸ್‌ ರಾಣಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾಳೆ.

ಕಳೆದ ಶುಕ್ರವಾರ ಆಕೆಯನ್ನು ಪೊಲೀಸರು ಬಂಧಿಸಿದಾಗ ಕೋರ್ಟ್‌ ನಾಲ್ಕು ದಿನಗಳ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿತ್ತು. ಪೊಲೀಸ್‌ ಕಸ್ಟಡಿ ಅವಧಿ ಸೋಮವಾರಕ್ಕೆ ಅಂತ್ಯಗೊಂಡ ಹಿನ್ನೆಲೆಯಲ್ಲಿ ಸೋಮವಾರ ಮತ್ತೆ ಕೋರ್ಟ್‌ಗೆ ಹಾಜರುಪಡಿಸಲಾಯಿತು. ಆಕೆಗೆ ಕೋರ್ಟ್‌ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್‌ ಆದೇಶ ನೀಡಿದೆ.

ಸೋಷಿಯಲ್‌ ಮೀಡಿಯಾ ಸ್ಟಾರ್‌ ಆಗಿರುವ ಸೋನು ಶ್ರೀನಿವಾಸ್ ಗೌಡ ರಾಯಚೂರಿನ ಮುದ್ದಪ್ಪ ಮತ್ತು ರಾಜೇಶ್ವರಿ ದಂಪತಿಯ ಏಳು ವರ್ಷದ ಮಗುವಿನ ಜತೆ ಮುದ್ದಾಟವಾಡುತ್ತಾ, ರೀಲ್ಸ್‌ ಮಾಡುತ್ತಿದ್ದ ಸೋನು ಬಳಿಕ ಮಗುವನ್ನು ತನಗೇ ಕೊಡಬೇಕು ಎಂದು ಹಠ ಹಿಡಿದಿದ್ದಳಂತೆ. 10 ಲಕ್ಷ ರೂ. ಆಮಿಷವನ್ನೂ ಒಡ್ಡಿದ್ದಳಂತೆ. ಆದರೆ ಮನೆಯವರು ಕೊಟ್ಟಿರಲಿಲ್ಲ.

ಆದರೆ, ಕಳೆದ ಮಾ. 1ರಂದು ರಾಯಚೂರಿನ ಮಗುವಿನ ಮನೆಗೆ ಹೋಗಿದ್ದ ಸೋನು ಗೌಡ ಮಲಗಿದ್ದ ಮಗುವನ್ನು ಎತ್ತಿಕೊಂಡು ಬಂದಿದ್ದಳೆನ್ನಲಾಗಿದೆ. ಮಗಳು 15 ದಿನ ನನ್ನ ಬಳಿ ಇರಲಿ. ಬಳಿಕ ಕರೆದುಕೊಂಡು ಬರುತ್ತೇನೆ ಎಂದಿದ್ದಳಂತೆ ಸೋನು. ಅಪ್ಪ ಅಮ್ಮ ಬೇಕು ಎಂದಾಗ ಕರೆದುಕೊಂಡು ಬರುತ್ತೇನೆ. ಮಗಳನ್ನು ನೋಡಬೇಕು ಎನಿಸಿದರೆ ನೀವೂ ಬನ್ನಿ ಎಂದಿದ್ದರು ಹೆತ್ತವರು.

ಮಗುವನ್ನು ಬೆಂಗಳೂರಿಗೆ ಕರೆದುಕೊಂಡು ಬಂದ ಬಳಿಕ, ನಾನು ಮಗುವನ್ನು ದತ್ತು ತೆಗೆದುಕೊಂಡಿದ್ದೇನೆ ಎಂದು ಸೋನು ಗೌಡ ಸೋಷಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದಳು. ಆದರೆ, ಅವಿವಾಹಿತೆಯಾಗಿರುವ ಆಕೆ ಹೇಗೆ ದತ್ತು ಪಡೆದುಕೊಂಡಳು. ಅದಕ್ಕೆ ಸಂಬಂಧಿಸಿದ ನಿಬಂಧನೆಗಳನ್ನು ಪಾಲನೆ ಮಾಡಲಾಗಿದೆಯಾ ಎಂಬ ಬಗ್ಗೆ ವಿಚಾರಿಸಿದಾಗ ಯಾವುದೇ ಕ್ರಮಗಳ ಪಾಲನೆ ಆಗಿಲ್ಲದಿರುವುದು ಪತ್ತೆಯಾಗಿತ್ತು. ಆಗ ಮಕ್ಕಳ ಕಲ್ಯಾಣ ಸಮಿತಿ ದೂರು ನೀಡಿ ಪ್ರಕರಣ ಬೆಳಕಿಗೆ ಬಂದಿತ್ತು. ಜತೆಗೆ ಮಗುವನ್ನು ದತ್ತು ಪಡೆದ ಬಗ್ಗೆ ಸಾಮಾಜಿಕವಾಗಿ ಹೇಳಿಕೊಳ್ಳುವಂತಿಲ್ಲ ಎಂಬ ನಿಯಮದ ಉಲ್ಲಂಘನೆಯಾಗಿದೆ ಎನ್ನುವುದು ಸಾಬೀತಾಗಿತ್ತು.

ಶುಕ್ರವಾರ ಸೋನು ಗೌಡಳನ್ನು ಬಂಧಿಸಿದ ಪೊಲೀಸರು ಭಾನುವಾರ ರಾಯಚೂರಿನ ಆ ಗ್ರಾಮಕ್ಕೆ ಕರೆದೊಯ್ದು ಮಹಜರು ನಡೆಸಿದ್ದರು. ಈ ವೇಳೆ ಗ್ರಾಮಸ್ಥರು ಆಕೆಯ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ಕಾರಿಗೆ ಕಲ್ಲು ತೂರಾಟ ಕೂಡಾ ನಡೆಸಿದ್ದರು.

 

 

Related Articles

Back to top button