ವರದಕ್ಷಿಣೆಯಾಗಿ ಕಿಡ್ನಿಯನ್ನೇ ಕೇಳಿದ ಅತ್ತೆ ಮಾವ: ಸೊಸೆಯಿಂದ ದೂರು

Views: 74
ಕನ್ನಡ ಕರಾವಳಿ ಸುದ್ದಿ: ಮಗನಿಗಾಗಿ ಕಿಡ್ನಿ ದಾನ ಮಾಡುವಂತೆ ಹಿಂಸೆ ನೀಡುತ್ತಿದ್ದಾರೆ ಎಂದು ಸೊಸೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಉತ್ತರ ಬಿಹಾರದ ಮುಜಫರ್‌ಪುರದಲ್ಲಿ ನಡೆದಿದೆ.
ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಮಗನಿಗೆ ಸೊಸೆ ವರದಕ್ಷಿಣೆ ಬದಲಿಗೆ ಕಿಡ್ನಿಯನ್ನು ನೀಡುವಂತೆ ಅತ್ತೆ ಮಾವ ಒತ್ತಡ ಹಾಕಿರುವುದು ಮಾತ್ರವಲ್ಲ ದೈಹಿಕವಾಗಿ ಹಿಂಸೆಯನ್ನು ನೀಡಿದ್ದಾರೆ. ಈ ಕುರಿತು ಮುಜಫರ್‌ಪುರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಉತ್ತರ ಬಿಹಾರದ ಮುಜಫರ್‌ಪುರದ ಬೊಚಾಹಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಂಡನ ಮನೆಯಲ್ಲಿ ವಾಸವಾಗಿರುವ ಮಹಿಳೆಯೊಬ್ಬರಿಗೆ ಅತ್ತೆ ಮಾವ ಸೇರಿ ತಮ್ಮ ಮಗನಿಗೆ ವರದಕ್ಷಿಣೆಯಾಗಿ ಮೂತ್ರಪಿಂಡವನ್ನು ನೀಡುವಂತೆ ಬೇಡಿಕೆಯಿಟ್ಟ ವಿಚಿತ್ರ ಘಟನೆ ನಡೆದಿದೆ.
ಈ ಕುರಿತು ಪೊಲೀಸರಿಗೆ ದೂರು ನೀಡಿರುವ ಮಹಿಳೆ ದೀಪ್ತಿ, ʼʼ2021ರಲ್ಲಿ ನಮ್ಮ ವಿವಾಹವಾಗಿತ್ತು. ಮದುವೆಯಾದ ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ಬಳಿಕ ಅತ್ತೆ ಮತ್ತು ಮಾವ ವರದಕ್ಷಿಣೆಗಾಗಿ ಕಿರುಕುಳ ನೀಡಲು ಪ್ರಾರಂಭಿಸಿದರು. ಮಾನಸಿಕ ಹಿಂಸೆಯ ಜತೆಗೆ ದೈಹಿಕವಾಗಿಯೂ ಹಲ್ಲೆ ನಡೆಸಿದ್ದಾರೆ. ತವರು ಮನೆಯಿಂದ ಬೈಕ್ ಮತ್ತು ಹಣ ತರುವಂತೆ ಒತ್ತಾಯಿಸಿದ್ದಾರೆʼʼ ಎಂದು ತಿಳಿಸಿದ್ದಾರೆ.
ʼʼಅವರ ಬೇಡಿಕೆಗಳನ್ನು ನಾನು ಒಪ್ಪಿಕೊಳ್ಳದೇ ಇದ್ದಾಗ ಅನಾರೋಗ್ಯ ಪೀಡಿತ ನನ್ನ ಪತಿ ಅಂದರೆ ಅವರ ಮಗನಿಗೆ ತನ್ನ ಒಂದು ಕಿಡ್ನಿಯನ್ನು ದಾನ ಮಾಡುವಂತೆ ಒತ್ತಾಯಿಸಲು ಪ್ರಾರಂಭಿಸಿದರುʼʼ ಎಂದು ದೀಪ್ತಿ ಹೇಳಿದ್ದಾರೆ.
ʼʼಗಂಡನಿಗೆ ಮೂತ್ರ ಪಿಂಡದ ಸಮಸ್ಯೆ ಇರುವುದು ಮೊದಲು ನನಗೆ ತಿಳಿದಿರಲಿಲ್ಲ. ಮದುವೆಯಾದ ಎರಡು ವರ್ಷಗಳ ಅನಂತರ ತಿಳಿಯಿತುʼʼ ಎಂದೂ ಅವರು ದೂರಿನಲ್ಲಿ ತಿಳಿಸಿದ್ದಾರೆ. ʼʼಮೊದಲು ಅತ್ತೆ ಮತ್ತು ಮಾವ ನನ್ನ ಮೂತ್ರಪಿಂಡವನ್ನು ಗಂಡನಿಗೆ ದಾನವಾಗಿ ಕೇಳುತ್ತಿದ್ದಾರೆ ಎಂದು ನಾನು ಭಾವಿಸಿದ್ದೆ. ಆದರೆ ಅನಂತರ ಅವರು ನನ್ನ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದರು. ನಾನು ನಿರಾಕರಿಸಿದ್ದಕ್ಕೆ ನನ್ನ ಮೇಲೆ ಹಲ್ಲೆಯನ್ನು ನಡೆಸಿ ಮನೆಯಿಂದ ಹೊರಹಾಕಿದ್ದಾರೆʼʼ ಎಂದು ದುಃಖ ತೋಡಿಕೊಂಡಿದ್ದಾರೆ.
ಬಳಿಕ ತಾನು ತವರು ಮನೆಗೆ ಹೋಗಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಗಿ ವಿವರಿಸಿದ್ದಾರೆ. ಪೊಲೀಸರು ಎರಡು ಕುಟುಂಬಗಳ ನಡುವೆ ಸಂಬಂಧ ಸುಧಾರಿಸಲು ಅವಕಾಶ ನೀಡಿದರೂ ಅದು ಸಾಧ್ಯವಾಗಲಿಲ್ಲ. ಇದರಿಂದ ದೀಪ್ತಿ ತನ್ನ ಪತಿಯಿಂದ ವಿಚ್ಛೇದನ ಪಡೆಯಬಹುದು ಎನ್ನುವ ಸಲಹೆ ನೀಡಿದರು. ಆದರೆ ಅದಕ್ಕೆ ಆಕೆ ಒಪ್ಪಲಿಲ್ಲ. ಅನಂತರ ಮಹಿಳಾ ಪೊಲೀಸ್ ಠಾಣೆಯಲ್ಲಿ ಆಕೆಯ ಪತಿ, ಅತ್ತೆ, ಮಾವ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.