ಯಕ್ಷಗಾನ ಪ್ರದರ್ಶನ ವೇಳೆ ವ್ಯಕ್ತಿಯೊಬ್ಬ ರಂಗಸ್ಥಳಕ್ಕೆ ಏರಿ ಸ್ತ್ರೀ ವೇಷಧಾರಿಯ ಕುತ್ತಿಗೆ ಹಿಡಿದು..ದಿಗ್ಭ್ರಮೆಗೊಳಗಾದ ಕಲಾವಿದರು!

Views: 350
ಕನ್ನಡ ಕರಾವಳಿ ಸುದ್ದಿ: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದ ವೇಳೆ ಸಭೆಯಲ್ಲಿ ಕುಳಿತು ಯಕ್ಷಗಾನ ವೀಕ್ಷಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬ ಏಕಾಏಕಿ ರಂಗಸ್ಥಳಕ್ಕೆ ಏರಿ ಬಂದು ಸ್ತ್ರೀ ವೇಷಧಾರಿಯ ಕುತ್ತಿಗೆ ಹಿಡಿದು ಗೊಂದಲ ಸೃಷ್ಟಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ನಂದುಗುರಿಯಲ್ಲಿ ನಡೆದಿದೆ.
ಕಡಬದ ಸೇವಾದಾರರಾದ ಕೃಷ್ಣ ಶೆಟ್ಟಿ ನಂದುಗುರಿ ಅವರ ಮನೆಯಲ್ಲಿ ಕಟೀಲು ಮೇಳದವರಿಂದ ಶ್ರೀದೇವಿ ಮಹಾತ್ಮೆ ಪ್ರದರ್ಶನ ನಡೆಯುತ್ತಿತ್ತು. ವಿದ್ಯುನ್ಮಾಲಿ ಮತ್ತು ಧಿತಿ ಪಾತ್ರಧಾರಿಗಳ ನಡುವೆ ಸಂಭಾಷಣೆ ನಡೆಯುತ್ತಿದ್ದ ವೇಳೆ ಯಕ್ಷಗಾನ ವೀಕ್ಷಿಸುತ್ತಿದ್ದ ಕಡಬದ ಕಳಾರ ಸಮೀಪದ ನಿವಾಸಿ ರಾಧಾಕೃಷ್ಣ ಎಂಬಾತ ಮೈಮೇಲೆ ಆವೇಶ ಬಂದ ರೀತಿಯಲ್ಲಿ ಹಠಾತ್ ಆಗಿ ರಂಗಸ್ಥಳದ ಮೇಲೇರಿ ವಿದ್ಯುನ್ಮಾಲಿ ಪಾತ್ರಧಾರಿಯ ಮೇಲೆರಗಿ ಕುತ್ತಿಗೆ ಹಿಡಿದಿದ್ದಾನೆ.
ಈ ಅನಿರೀಕ್ಷಿತ ಘಟನೆಯಿಂದ ದಿಗ್ಭ್ರಮೆಗೊಳಗಾದ ಕಲಾವಿದರು ಹಾಗೂ ಹಿಮ್ಮೇಳದವರು ಆತನನ್ನು ಹಿಡಿದುಕೊಂಡು ರಂಗಸ್ಥಳದಿಂದ ಹೊರಗೊಯ್ದರು. ರಂಗಸ್ಥಳದ ಹೊರಗೆ ಆತನನ್ನು ಹಿಡಿದಿಟ್ಟುಕೊಂಡಿದ್ದಾಗ ಆತ ಆವೇಶ ಕಡಿಮೆಯಾಗಲು ತೀರ್ಥ ಪ್ರೋಕ್ಷಣೆ ಮಾಡಲು ಬಂದ ಅರ್ಚಕರ ಮೇಲೇರಗಲು ಹೋದ ಘಟನೆಯೂ ನಡೆಯಿತು.
ಬಳಿಕ ಸೇರಿದ ಜನರು ಆತನನ್ನು ವಾಹನದಲ್ಲಿ ಕುಳ್ಳಿರಿಸಿ ಆತನ ಮನೆಗೆ ಬಿಟ್ಟು ಬಂದಿದ್ದಾರೆ. ಆದರೆ ಅಲ್ಲಿಂದ ಕೆಲವೇ ಸಮಯದಲ್ಲಿ ಬೊಬ್ಬೆ ಹೊಡೆದುಕೊಂಡು ಯಕ್ಷಗಾನ ನಡೆಯುಲ್ಲಿಗೆ ಮತ್ತೆ ಧಾವಿಸಿ ಬಂದ ಆತನನ್ನು ತಡೆಯಲು ಹೋದ ಜನರ ಮೇಲೆರಗಿ ಮತ್ತೆ ಗೊಂದಲ ಸೃಷ್ಟಿಸಿದ್ದಾನೆ.






