ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪೊಲೀಸರಿಂದ ಕೋಳಿಗಳ ಹರಾಜು! ನಾ ಮುಂದು, ತಾ ಮುಂದು ಅಂತಾ ಖರೀದಿಸಿದ ಜನ

Views: 62
ಉಡುಪಿ: ಪೊಲೀಸ್ ಠಾಣೆಯಲ್ಲಿ ಕೋಳಿ ಹರಾಜು ನಡೆದ ಪ್ರಸಂಗವೊಂದು ಉಡುಪಿಯಲ್ಲಿ ನಡೆದಿದೆ. ಇಲ್ಲಿನ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪೊಲೀಸರೇ ಕೋಳಿಗಳನ್ನು ಹರಾಜು ಕೂಗಿದ್ದಾರೆ. ಸುಮಾರು 25 ರಷ್ಟಿದ್ದ ಕೋಳಿಗಳನ್ನು ಹರಾಜು ಕೂಗುತ್ತಾ ಮಾರಾಟ ಮಾಡಿದ್ದಾರೆ.
ಕೋಳಿಗಳೆಲ್ಲವೂ ಕೋಳಿ ಅಂಕಕ್ಕೆ ದಾಳಿ ನಡೆಸಿದ ವೇಳೆ ಪೊಲೀಸರು ವಶಕ್ಕೆ ಪಡೆದುಕೊಂಡದ್ದಾಗಿತ್ತು. ಸಾಮಾನ್ಯವಾಗಿ ಕರಾವಳಿ ಭಾಗದಲ್ಲಿ ಕೋಳಿ ಅಂಕ ನಡೆಯುತ್ತವೆ ಆದ್ರೂ, ಅದಕ್ಕೆ ಯಾವುದೇ ಅನುಮತಿ ನೀಡಲಾಗುವುದಿಲ್ಲ. ಕೋಳಿ ಅಂಕದಲ್ಲಿ ಬೆಟ್ಟಿಂಗ್ ದಂಧೆಯೂ ನಡೆಯುತ್ತದೆ, ಹಾಗಾಗಿ ಇದನ್ನು ಕಾನೂನು ವಿರೋಧಿ ಎಂದೇ ಪರಿಗಣಿಸಲಾಗಿದೆ. ಒಂದು ವೇಳೆ ಅಕ್ರಮವಾಗಿ ಕೋಳಿ ಅಂಕ ನಡೆಸಿದ್ದಲ್ಲಿ ಪೊಲೀಸರು ದಾಳಿ ನಡೆಸಿ ಅಂತಹ ಕೋಳಿಗಳನ್ನು ವಶಕ್ಕೆ ಪಡೆಯುತ್ತಾರೆ.
ಮಣಿಪಾಲ ಪೊಲೀಸರು ಸುಮಾರು 25 ರಷ್ಟು ಕೋಳಿಗಳನ್ನು ಇತ್ತೀಚೆಗೆ ವಶಕ್ಕೆ ಪಡೆದಿದ್ದರು. ಆದರೆ, ಠಾಣೆಯಲ್ಲಿ ಇರಿಸಿ ಸಾಕುವುದು ಕಷ್ಟವಾದ್ದರಿಂದ, ಪೊಲೀಸರು ಹರಾಜಿಗಿಟ್ಟಿದ್ದಾರೆ.
ಇನ್ನು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಹಲವು ಮಂದಿ ಠಾಣೆ ಮುಂದೆ ಜಮಾಯಿಸಿದ್ದರು. ನಾ ಮುಂದು, ತಾ ಮುಂದು ಅಂತಾ ಹರಾಜಿಗಿಟ್ಟ ಕೋಳಿಗಳನ್ನ ಖರೀದಿಸಿದ್ದಾರೆ.