ಮಂಡ್ಯದಿಂದಲೇ ಸ್ಪರ್ಧಿಸಬೇಕು ಎಂಬ ಪಣ ತೊಟ್ಟಿರುವ ಸುಮಲತಾ ಇಂದು ರಾಜಕೀಯ ನಡೆಯ ಬಗ್ಗೆ ಬೆಂಬಲಿಗರ ಸಭೆ

Views: 21
ಬೆಂಗಳೂರು :ಮಂಡ್ಯ ಲೋಕಸಭಾ ಕ್ಷೇತ್ರದಿಂದಲೇ ಈ ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲು ನಿರ್ಧರಿಸಿರುವ ಹಾಲಿ ಸಂಸದೆ ಸುಮಲತಾ ಅಂಬರೀಷ್ ಒಂದು ವೇಳೆ ಈ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಸಿಗದಿದ್ದರೆ ಮುಂದಿನ ರಾಜಕೀಯ ನಡೆ ಏನಿರಬೇಕು ಎಂಬುದನ್ನು ತೀರ್ಮಾನ ಮಾಡಲು ತಮ್ಮ ಬೆಂಬಲಿಗರ ಸಭೆ ಕರೆದಿದ್ದಾರೆ.
ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಪೈಪೋಟಿ ಬಿರುಸಾಗಿದ್ದು, ಒಂದೆಡೆ ಹಾಲಿ ಸಂಸದೆ ಸುಮಲತಾ ಅಂಬರೀಷ್ ಬಿಜೆಪಿ ಟಿಕೆಟ್‌ಗೆ ಪಟ್ಟು ಹಿಡಿದಿದ್ದರೆ. ಮತ್ತೊಂದೆಡೆ ಬಿಜೆಪಿ ಹೈಕಮಾಂಡ್ ಮಂಡ್ಯ ಕ್ಷೇತ್ರವನ್ನು ದೋಸ್ತಿ ಪಕ್ಷವಾದ ಜೆಡಿಎಸ್‌ಗೆ ಬಿಟ್ಟುಕೊಡುವ ಬಗ್ಗೆ ಚಿಂತನೆ ನಡೆಸಿದೆ. ಹಾಗಾಗಿ, ಈ ಬಾರಿಯೂ ಮಂಡ್ಯದಿಂದಲೇ ಸ್ಪರ್ಧಿಸಬೇಕು ಎಂಬ ಪಣ ತೊಟ್ಟಿರುವ ಸುಮಲತಾ ಅಂಬರೀಷ್ ಇಂದು ಸಂಜೆ ತಮ್ಮ ಬೆಂಬಲಿಗರು, ಹಿತೈಷಿಗಳ ಜತೆ ಮಹತ್ವದ ಸಭೆ ನಡೆಸಿ ಮುಂದಿನ ರಾಜಕೀಯ ನಡೆ ಏನಾಗಿರಬೇಕು ಎಂಬುದನ್ನು ಚರ್ಚಿಸಲಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುಮಲತಾ ಅಂಬರೀಷ್ ಬೆಂಬಲಿಗರು, ಹಾಗೂ ಹಿತೈಷಿಗಳ ಸಭೆ ಕರೆದಿದ್ದು, ಈ ಸಭೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಪ್ರಮುಖ ಮುಖಂಡರುಗಳು ಸುಮಲತಾ ಅಂಬರೀಷ್ ಅವರ ಬೆಂಬಲಿಗರು, ಹಿತೈಷಿಗಳು ಭಾಗಿಯಾಗಲಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರವನ್ನು ಮಿತ್ರಪಕ್ಷವಾದ ಜೆಡಿಎಸ್ ಬಿಟ್ಟುಕೊಡುವ ತೀರ್ಮಾನವನ್ನು ಬಿಜೆಪಿ ಹೈಕಮಾಂಡ್ ತೆಗೆದುಕೊಂಡಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಈ ಬಗ್ಗೆ ಅಧಿಕೃತವಾಗಿ ಬಿಜೆಪಿ ನಾಯಕರು ತೀರ್ಮಾನ ಪ್ರಕಟಿಸಿಲ್ಲವಾದರೂ ಒಂದು ವೇಳೆ ಈ ರೀತಿಯ ತೀರ್ಮಾನವಾದರೆ ಮುಂದಿನ ಹೆಜ್ಜೆ ಏನು ಎಂಬುದನ್ನು ನಿರ್ಧರಿಸಲು ಈ ಸಭೆಯನ್ನು ಕರೆಯಲಾಗಿದೆ.
ಮುಂದಿನ ರಾಜಕೀಯ ನಡೆಯ ಬಗ್ಗೆ ತೀರ್ಮಾನ ಕೈಗೊಳ್ಳಲು ಸಂಸದೆ ಸುಮಲತಾ ಅಂಬರೀಷ್ ಕರೆದಿರುವ ಸಭೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಪಾಲ್ಗೊಳ್ಳುತ್ತಿರುವುದು ರಾಜಕೀಯವಾಗಿ ಸಂಚಲನ ಮೂಡಿಸಿದೆ.
ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನಟರಾದ ದರ್ಶನ್ ಮತ್ತು ಯಶ್ ಜೋಡೆತ್ತುಗಳಾಗಿ ಸುಮಲತಾ ಪರ ಇಡೀ ಮಂಡ್ಯಕ್ಷೇತ್ರದಲ್ಲೇಲ್ಲ ಪ್ರಚಾರ ನಡೆಸಿ ಅವರ ಗೆಲುವಿಗೆ ನೆರವಾಗಿದ್ದರು.
ಸುಮಲತಾ ಪರ ನಿಂತಿರುವ ದರ್ಶನ್, ಇಂದಿನ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಈ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಪರ ಅವರು ಪ್ರಚಾರ ನಡೆಸಲಿದ್ದಾರೆ ಎಂದು ಹೇಳಲಾಗಿದೆ.