ಭಾರೀ ವಿದ್ವಂಸಕ ಕೃತ್ಯ ಸಂಚು ಬಯಲು: ಐವರು ಶಂಕಿತ ಉಗ್ರರ ಸೆರೆ

Views: 0
ಉಗ್ರರ ಜೊತೆ ಸಂಪರ್ಕ ಸಾಧಿಸಿ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ಕೇಂದ್ರ ಗುಪ್ತಚರ ಇಲಾಖೆ ಮತ್ತು ರಾಷ್ಟ್ರೀಯ ತನಿಖಾ ದಳ ನೀಡಿದ ಮಾಹಿತಿಯಂತೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಉಗ್ರ ಸಂಘಟನೆ ಲಷ್ಕರ್- ಎ- ತಯ್ಯಾಬಾ ಸಂಘಟನೆಗೆ ನಿಕಟ ಸಂಪರ್ಕ ಹೊಂದಿರುವ ಆರೋಪದಲ್ಲಿ ಸೈಯದ್ ಸುಹೇಲ್, ಉಮರ್, ಜುವೈ ದ್, ಮುದಾಸಿರ್ ಹಾಗೂ ಪೈಜಲ್ ರಬ್ಬಾನಿ ಬಂಧಿತ ಆರೋಪಿಗಳು. ಬೆಂಗಳೂರಿನ ಹೆಬ್ಬಾಳ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಸುಲ್ತಾನ್ ಪಾಳ್ಯದ ಕನಕ ನಗರದ ಮಸೀದಿ ಬಳಿಯ ಮನೆಯೊದರಲ್ಲಿ ಆರೋಪಿಗಳು ಸಿಸಿಬಿ ಬಲೆಗೆ ಬಿದ್ದಿದ್ದಾರೆ.
ಬಂಧಿತರಿಂದ 7 ದೇಶಿ ನಿರ್ಮಿತ ಪಿಸ್ತೂಲುಗಳು, 45 ಸಜೀವ ಗುಂಡುಗಳು ,12 ಮೊಬೈಲ್ ಗಳು, ಹಲವು ವಾಕಿ ಟಾಕಿಗಳು, 1 ಡ್ಯಾಗ್ನರ್, ಲ್ಯಾಪ್ ಟ್ಯಾಪ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಐಟಿ -ಬಿಟಿ ಕಂಪನಿ, ಐಷಾರಾಮಿ ಹೋಟೆಲ್ ಗಳು, ಬಸ್ ನಿಲ್ದಾಣಗಳು, ಬಹು ಮಹಡಿಯ ಕಟ್ಟಡಗಳು, ಸರ್ಕಾರಿ ಕಚೇರಿಗಳನ್ನು ಗುರಿಯಾಗಿಟ್ಟುಕೊಂಡು ಸ್ಪೋಟ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಆತಂಕದ ಸಂಗತಿ ಎಂದರೆ ಬಂಧಿತರಿಗೆ ಉಗ್ರ ಕೃತ್ಯಗಳು ಎಸಗುವ ಕುರಿತು ಜೈಲಿನಲ್ಲಿ ತರಬೇತಿ ನೀಡಲಾಗಿತ್ತು. ಇನ್ನು ಹಲವು ಸಂಚು ರೂಪಿಸಿರುವ ಸಾಧ್ಯತೆಗಳಿದ್ದು ,ಗುಪ್ತಚರ ಇಲಾಖೆ ಹಾಗೂ ಎನ್ಐಎ ಗೌಪ್ಯವಾಗಿ ಮಾಹಿತಿ ಕಲೆ ಹಾಕುತ್ತಿದ್ದಾರೆ.