ಇತರೆ

ಭಾರತೀಯ ಮೂಲದ ನರ್ಸ್ ನಿಮಿಷಾ ಪ್ರಿಯಾಗೆ ಜುಲೈ 16ರಂದು ಯೆಮೆನ್ ನಲ್ಲಿ ಗಲ್ಲು

Views: 383

ಕನ್ನಡ ಕರಾವಳಿ ಸುದ್ದಿ: ಯೆಮೆನ್ ಪ್ರಜೆಯ ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕೇರಳದ ಪಾಲಕ್ಕಾಡ್‌ ಮೂಲದ ನರ್ಸ್, 36 ವರ್ಷದ ನಿಮಿಷಾ ಪ್ರಿಯಾ ಅವರನ್ನು ಜುಲೈ 16ರಂದು ಗಲ್ಲಿಗೇರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಯೆಮೆನ್ ಅಧ್ಯಕ್ಷ ನಿಮಿಷಾ ಅವರಿಗೆ ಕ್ಷಮಾಪಣೆ ನೀಡಲು ನಿರಾಕರಿಸಿದ್ದರಿಂದ ಅವರನ್ನು ಗಲ್ಲಿಗೇರಿಸಲಾಗುತ್ತದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಕೆಲಸ ಅರಸಿಕೊಂಡು 2008ರಲ್ಲಿ ಯೆಮೆನ್‌ಗೆ ತೆರಳಿದ್ದ ನಿಮಿಷಾ ಪ್ರಿಯಾ ಅವರ ಮೇಲಿನ ಕೊಲೆ ಆರೋಪ ಸಾಬೀತಾಗಿದೆ.

2017ರಿಂದಲೂ ಜೈಲು ಶಿಕ್ಷೆ ಅನುಭವಿಸುತ್ತಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರ ಕ್ಷಮಾಪಣ ಮನವಿಯನ್ನು ಯೆಮನ್ ಅಧ್ಯಕ್ಷ ರಷದ್ ಅಲ್ ಅಲಿಮಿ ಕೂಡ ತಿರಸ್ಕರಿಸಿದ್ದಾರೆ.

ಘಟನೆ ವಿವರ: ಯೆಮೆನ್‌ ವಿವಿಧ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸಿದ ನಿಮಿಷಾ ಪ್ರಿಯಾ 2014ರಲ್ಲಿ ಯೆಮೆನ್ ಪ್ರಜೆಯಾದ ತಲಾಲ್ ಅಬ್ದೋ ಮೆಹದಿ ಜತೆ ಸೇರಿ ತಮ್ಮದೇ ಕ್ಲಿನಿಕ್‌ ತೆರೆದಿದ್ದರು. ಅದೇ ವರ್ಷ ಅವರ ಪತಿ ಮತ್ತು ಮಗಳು ಹಣಕಾಸಿನ ಕಾರಣಗಳಿಂದಾಗಿ ಭಾರತಕ್ಕೆ ಮರಳಿದ್ದರು. ಇದೇ ವೇಳೆ ಯೆಮನ್‌ನಲ್ಲಿ ಅಂತರಿಕ ಯುದ್ಧ ಆರಂಭವಾಗಿದ್ದರಿಂದ ನಿಮಿಷಾಗೆ ಭಾರತಕ್ಕೆ ಹಿಂತಿರುಗಲು ಸಾಧ್ಯವಾಗಿರಲಿಲ್ಲ.

ತಮ್ಮದೇ ಕ್ಲಿನಿಕ್‌ ಆರಂಭಿಸಿದ ಕೆಲವು ಸಮಯದ ಬಳಿಕ ನಿಮಿಷಾ ಪ್ರಿಯಾ ಮತ್ತು ಮೆಹದಿ ಜತೆ ಮನಸ್ತಾಪ ಉಂಟಾಗಿತ್ತು. ಆತನ ವಿರುದ್ಧ ನಿಮಿಷಾ ದೂರು ಕೂಡ ದಾಖಲಿಸಿದ್ದರು. ಅದರಂತೆ 2016ರಲ್ಲಿ ಆತನನ್ನು ಬಂಧಿಸಲಾಯಿತು. ಜೈಲಿನಿಂದ ಬಿಡುಗಡೆಯಾದ ಬಳಿಕ ಆತ ಆಕೆಗೆ ಬೆದರಿಕೆ ಹಾಕುತ್ತಲೇ ಇದ್ದ ಎನ್ನಲಾಗಿದೆ.

ಅಲ್ಲದೆ ಮೆಹದಿ ಆಕೆಯ ಪಾಸ್‌ಪೋರ್ಟ್‌ ವಶಕ್ಕೆ ಪಡೆದು ಕಿರುಕುಳ ನೀಡುತ್ತಿದ್ದ ಎಂದು ನಿಮಿಷಾ ಕುಟುಂಬಸ್ಥರು ಆರೋಪಿಸಿದ್ದಾರೆ. ಕಿರುಕುಳದಿಂದ ಬೇಸತ್ತು ನಿಮಿಷಾ ಮೆಹದಿಯಿಂದ ತನ್ನ ಪಾಸ್‌ಪೋರ್ಟ್‌ ಪಡೆಯಲು ಆತನಿಗೆ 2017ರಲ್ಲಿ ನಿದ್ದೆ ಬರುವ ಚುಚ್ಚುಮದ್ದು ನೀಡಿದ್ದರು. ಇದರ ಡೋಸ್‌ ಹೆಚ್ಚಾಗಿ ಆತ ಅಸುನೀಗಿದ್ದ. ಬಳಿಕ ಆತನ ಮೃತದೇಹವನ್ನು ಅಡಗಿಸಲು ಯತ್ನಿಸಿ, ದೇಶ ಬಿಡಲು ಮುಂದಾಗಿದ್ದ ನಿಮಿಷಾ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದರು. 2018ರಲ್ಲಿ ಅವರ ಮೇಲೆ ಕೊಲೆ ಆರೋಪ ಹೊರಿಸಲಾಯಿತು. 2020ರಲ್ಲಿ ಯೆಮೆನ್ ವಿಚಾರಣಾ ನ್ಯಾಯಾಲಯವು ನಿಮಿಷಾಗೆ ಮರಣದಂಡನೆ ವಿಧಿಸಿತು. ದೇಶದ ಸುಪ್ರೀಂ ಜುಡಿಷಿಯಲ್ ಕೌನ್ಸಿಲ್ 2023ರಲ್ಲಿ ಈ ತೀರ್ಪನ್ನು ಎತ್ತಿ ಹಿಡಿಯಿತು.

ನಿಮಿಷಾ ಬಿಡುಗಡೆಗಾಗಿ ಬ್ಲಡ್‌ ಮನಿಯನ್ನು ಮೆಹದಿ ಕುಟುಂಬಕ್ಕೆ ನೀಡುವ ಆಯ್ಕೆಯನ್ನು ನಿಮಿಷಾ ಕುಟುಂಬಸ್ಥರ ಮುಂದಿಡಲಾಯಿತು. ಮರಣ ದಂಡನೆಯನ್ನು ಮನ್ನಾ ಮಾಡಲು ಹತ್ಯೆಯಾದ ವ್ಯಕ್ತಿಯ ಕುಟುಂಬಕ್ಕೆ ನೀಡುವ ಪರಿಹಾರ ಧನವನ್ನು ಬ್ಲಡ್‌ ಮನಿ ಎಂದು ಕರೆಯಲಾಗುತ್ತದೆ. ಇದೇ ಕಾರಣಕ್ಕೆ ನಿಮಿಷಾ ಅವರ ತಾಯಿ ಪ್ರೇಮ ಕುಮಾರಿ ತಮ್ಮ ಮನೆಯನ್ನು ಮಾರಾಟ ಮಾಡಿ ಯೆಮೆನ್‌ಗೆ ತೆರಳಿ ಮಗಳನ್ನು ಕಾಪಾಡಲು ಯತ್ನಿಸಿದ್ದರು. ಬ್ಲಡ್‌ ಮನಿಯಾಗಿ ನೀಡಲು 1 ಮಿಲಿಯನ್ ಡಾಲರ್ (8.57 ಕೋಟಿ ರೂ.) ಸಂಗ್ರಹಿಸಲು ಪ್ರಯತ್ನವೂ ನಡೆದಿತ್ತು. ನಿಮಿಷಾ ಅವರ ಬಿಡುಗಡೆಗೆ ಕೇಂದ್ರವೂ ಪ್ರಯತ್ನಿಸಿತ್ತು.

Related Articles

Back to top button