ಭಟ್ಕಳ ನಾಲ್ವರ ಕೊಲೆ ಪ್ರಕರಣ: ಮಗನಿಗೆ ಮರಣದಂಡನೆ, ತಂದೆಗೆ ಜೀವಾವಧಿ ಶಿಕ್ಷೆ

Views: 137
ಕನ್ನಡ ಕರಾವಳಿ ಸುದ್ದಿ: ತಾಲೂಕಿನ ಹಾಡವಳ್ಳಿಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಭೀಕರವಾಗಿ ಹತ್ಯೆ ಮಾಡಿದ ಅಪರಾಧಿಗಳ ಪೈಕಿ ಓರ್ವನಿಗೆ ಮರಣದಂಡನೆ ಹಾಗೂ ಆತನ ತಂದೆಗೆ ಜೀವಾವಧಿ ಶಿಕ್ಷೆ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ.ಎಸ್.ವಿಜಯಕುಮಾರ್ ಆದೇಶ ನೀಡಿದ್ದಾರೆ.
ಅಪರಾಧಿ ಹಾಡುವಳ್ಳಿಯ ವಿನಯ ಶ್ರೀಧರ್ ಭಟ್ ಗೆ ಮರಣ ದಂಡನೆ ಹಾಗೂ ಆತನ ತಂದೆ ಶ್ರೀಧರ್ ಜನಾರ್ಧನ ಭಟ್ ಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಮತ್ತೊಬ್ಬ ಆರೋಪಿ ವಿದ್ಯಾ ಶ್ರೀಧರ್ ಭಟ್ ಅವರನ್ನು ಸಾಕ್ಷಾಧಾರಗಳ ಕೊರತೆಯಿಂದ ಕೈಬಿಡಲಾಗಿದೆ.
ಭಟ್ಕಳ ತಾಲೂಕಿನ ಹಾಡವಳ್ಳಿಯಲ್ಲಿ 2023ರಲ್ಲಿ ಶಂಭು ಭಟ್ (65), ಅವರ ಪತ್ನಿ ಮಾದೇವಿ ಭಟ್ (40), ಮಗ ರಾಘವೇಂದ್ರ ಭಟ್ (34) ಹಾಗೂ ಸೊಸೆ ಕುಸುಮಾ ಭಟ್ (30) ಎನ್ನುವರನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಅದೃಷ್ಟವಶಾತ್ ರಾಘವೇಂದ್ರ-ಕುಸುಮಾ ದಂಪತಿಯ ಮಕ್ಕಳು ಈ ವೇಳೆ ಬಚಾವ್ ಆಗಿತ್ತು. ಈ ಬಗ್ಗೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಅಂದಿನ ಪೊಲೀಸ್ ನಿರೀಕ್ಷರಾಗಿದ್ದ ಚಂದನ್ ಗೋಪಾಲ್ ಅವರು ಶ್ರೀಧರ್ ಜನಾರ್ಧನ ಭಟ್, ವಿನಯ ಶ್ರೀಧರ್ ಭಟ್ ಹಾಗೂ ವಿದ್ಯಾ ಶ್ರೀಧರ್ ಭಟ್ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಕೆ ಮಾಡಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯವು, ಪ್ರತ್ಯಕ್ಷ ಸಾಕ್ಷಿ ಹಾಗೂ ಮರಣೋತ್ತರ ಪರೀಕ್ಷೆ ಸೇರಿದಂತೆ ಇನ್ನಿತರ ಸಾಕ್ಷ್ಯಗಳನ್ನು ಪರಿಗಣಿಸಿ, ಆರೋಪಿಗಳ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ಒಂದನೇ ಅಪರಾಧಿ ಶ್ರೀಧರ್ ಭಟ್ಗೆ ಜೀವಾವಧಿ ಶಿಕ್ಷೆ ಹಾಗೂ ಆತನ ಮಗ ವಿನಯ ಶ್ರೀಧರ್ ಭಟ್‌ಗೆ ಮರಣದಂಡನೆ ವಿಧಿಸಿ ಆದೇಶ ನೀಡಿದೆ. ಪ್ರಕರಣದಲ್ಲಿ ಸಂತ್ರಸ್ತರ ಪರವಾಗಿ ಸರ್ಕಾರಿ ಅಭಿಯೊಜಕಿ ತನುಜಾ ಹೊಸಪಟ್ಟಣ ವಾದ ಮಂಡಿಸಿದ್ದರು.