ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ v/s ಯತ್ನಾಳ್ ಫೈಟ್: ಫೆಬ್ರವರಿಯಲ್ಲಿ ರಾಜ್ಯಾಧ್ಯಕ್ಷರ ಚುನಾವಣೆ?

Views: 40
ಕನ್ನಡ ಕರಾವಳಿ ಸುದ್ದಿ: ವಿಜಯೇಂದ್ರ v/s ಯತ್ನಾಳ್ ನಡುವಿನ ಯುದ್ಧ ಮುಂದುವರಿದಿದೆ. ಇದೀಗ ರಾಜ್ಯಾಧ್ಯಕ್ಷ ಸ್ಥಾನದ ಫೈಟ್ ಶುರುವಾಗಿದೆ. ಫೆಬ್ರವರಿಯಲ್ಲಿ ಮೊದಲ ಬಾರಿಗೆ ಚುನಾವಣೆ ಮೂಲಕ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಕರ್ನಾಟಕ ಬಿಜೆಪಿಯಲ್ಲಿನ ಕೋಲಾಹಲ, ಸಮರ ಇನ್ನು ಮುಗಿದಿಲ್ಲ. ಹೈಕಮಾಂಡ್ ಅದೆಷ್ಟೇ ಸ್ಟ್ರಾಂಗ್ ಆಗಿದ್ದರೂ ಕರ್ನಾಟಕದ ಇತಿಹಾಸದಲ್ಲೇ ಬಿಜೆಪಿ ಒಳಜಗಳ ಶಮನ ಮಾಡಲು ಸಾಧ್ಯವಾಗಿಲ್ಲ. ಇದೀಗ ಮತ್ತೊಮ್ಮೆ ವಿಜಯೇಂದ್ರ v/s ಯತ್ನಾಳ್ ಫೈಟ್ ಶುರುವಾಗಿದೆ. ರಾಜ್ಯ ಬಿಜೆಪಿ ಇತಿಹಾಸದಲ್ಲೇ ಮೊದಲ ಬಾರಿ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಗೆ ಚುನಾವಣೆಯಾಗುತ್ತಾ? ಪ್ರತಿ ಬಾರಿ ಪ್ರಕ್ರಿಯೆಯ ರೂಪದಲ್ಲಿ ಅವಿರೋಧ ಆಯ್ಕೆಯಾಗ್ತಿತ್ತು. ಆದರೆ ಈ ಬಾರಿ ಚುನಾವಣೆಯಲ್ಲಿ ಯತ್ನಾಳ್ ಟೀಂನಿಂದ ಸ್ಪರ್ಧೆ ಸಾಧ್ಯತೆ ಇದೆ.
ದಿಲ್ಲಿ ಚುನಾವಣೆ ಹಾಗೂ ಕೇಂದ್ರ ಬಜೆಟ್ ಅನಂತರ ಆಯ್ಕೆ ಪ್ರಕ್ರಿಯೆ ನಡೆಸುವುದು ಸೂಕ್ತ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಫೆ. 5ರಂದು ದಿಲ್ಲಿ ಚುನಾವಣೆ ನಡೆದು, ಫೆ. 8ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಅಲ್ಲಿ ಸರಕಾರ ರಚನೆ ಪ್ರಕ್ರಿಯೆ ಪೂರ್ಣಗೊಂಡು, ಕೇಂದ್ರ ಬಜೆಟ್ ಮಂಡನೆಯಾದ ಅನಂತರ ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯತ್ತ ವರಿಷ್ಠರು ಗಮನ ಹರಿಸುವ ಸಾಧ್ಯತೆ ಇದೆ.
ಈಗ ಯತ್ನಾಳ್, ಜಾರಕಿಹೊಳಿ ಗುಂಪಿನಲ್ಲಿರುವ ಮಾಜಿ ಸಚಿವರಾದ ಕುಮಾರ್ ಬಂಗಾರಪ್ಪ ಹಾಗೂ ಅರವಿಂದ ಲಿಂಬಾವಳಿ ಅವರ ಹೆಸರು ಬಿಜೆಪಿ ರಾಜ್ಯಾಧ್ಯಕ್ಷ ಅಭ್ಯರ್ಥಿಯಾಗಿ ತೇಲಿ ಬಿಡಲಾಗುತ್ತಿದ್ದು, ಚುನಾವಣೆಗೆ ಸ್ಪರ್ಧಿಸಲು ಇಬ್ಬರೂ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ.