ಬಸ್-ಟ್ರಕ್ ನಡುವೆ ಭೀಕರ ಅಪಘಾತ; 12 ಮಂದಿ ಸಾವು, 25 ಜನರಿಗೆ ಗಾಯ

Views: 44
ಅಸ್ಸಾಂನ ಗೋಲಾಘಾಟ್ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ಟ್ರಕ್ ಮತ್ತು ಬಸ್ ನಡುವೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ 12 ಜನರು ಸಾವನ್ನಪ್ಪಿದ್ದಾರೆ ಮತ್ತು 25 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಗೋಲಾಘಾಟ್ ಜಿಲ್ಲೆಯ ದೇರ್ಗಾಂವ್ ಬಳಿಯ ಬಲಿಜನ್ ಪ್ರದೇಶದಲ್ಲಿ ಮುಂಜಾನೆ 5 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಗೋಲಾಘಾಟ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇನ್ ಸಿಂಗ್ ಅವರನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.
“ಬಸ್ ಗೋಲಘಾಟ್ ಜಿಲ್ಲೆಯ ಕಮರ್ಬಂಧ ಪ್ರದೇಶದಿಂದ ತಿಲಿಂಗ ಮಂದಿರದ ಕಡೆಗೆ ತೆರಳುತ್ತಿತ್ತು. ಬಲಿಜನ್ ಪ್ರದೇಶದಲ್ಲಿ ಬಸ್ ಮತ್ತು ಟ್ರಕ್ ನಡುವೆ ಡಿಕ್ಕಿಯಾಗಿದೆ. ಟ್ರಕ್ ಜೋರ್ಹತ್ ಕಡೆಯಿಂದ ವಿರುದ್ಧ ದಿಕ್ಕಿನಲ್ಲಿ ಆಗಮಿಸುತ್ತಿತ್ತು. ಘಟನಾ ಸ್ಥಳದಲ್ಲಿ 10 ಮೃತದೇಹಗಳು ದೊರೆತಿವೆ. ಅವುಗಳನ್ನು ದೇರ್ಗಾಂವ್ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದಲ್ಲಿ 27 ಮಂದಿ ಗಾಯಗೊಂಡಿದ್ದಾರೆ. ಅವರನ್ನು ಜೋರ್ಹತ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ರಾಜೇನ್ ಸಿಂಗ್ ತಿಳಿಸಿದ್ದಾರೆ.
ಘಟನೆಯ ಸುದ್ದಿ ತಿಳಿದು ಸ್ಥಳೀಯರು ಧಾವಿಸಿ ಬಂದಿದ್ದು, ಅಧಿಕಾರಿಗಳೊಂದಿಗೆ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಅಪಘಾತದಲ್ಲಿ ಇದುವರೆಗೆ 12 ಜನರು ಸಾವನ್ನಪ್ಪಿದ್ದಾರೆ ಎಂದು ಗೋಲಾಘಾಟ್ ಜಿಲ್ಲಾ ಎಸ್ಪಿ ಮಾಹಿತಿ ನೀಡಿದ್ದಾರೆ.