ಪ್ರೇಯಸಿಯನ್ನು ಕೊಂದು ಗೋಣಿ ಚೀಲದಲ್ಲಿ ಶವ ಬಚ್ಚಿಟ್ಟು ಪ್ರಿಯಕರ ಪರಾರಿ!
Views: 88
ಕನ್ನಡ ಕರಾವಳಿ ಸುದ್ದಿ: ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಪ್ರೇಯಸಿಯನ್ನು ಯುವಕನೊಬ್ಬ ಚಾಕುವಿನಿಂದ ಇರಿದು ಹತ್ಯೆ ಮಾಡಿ, ಬಳಿಕ ಆಕೆಯ ಮೃತದೇಹವನ್ನು ಗೋಣಿ ಚೀಲದಲ್ಲಿ ಬಚ್ಚಿಟ್ಟು ಪರಾರಿಯಾಗಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ಮೃತ ಯುವತಿಯನ್ನು ಬಿಹಾರ ಮೂಲದ ರೆಹಾನಾ ಎಂದು ಗುರುತಿಸಲಾಗಿದೆ. ರೆಹಾನಾ ಹೈದರಾಬಾದ್‌ನ ಬ್ಯಾಂಕ್ವೆಟ್ ಹಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಬಿಹಾರ ಮೂಲದವರೇ ಆಗಿರುವ 21 ವರ್ಷದ ಅಹ್ಮದ್ ಸಲಾಂ ಎಂಬಾತನೊಂದಿಗೆ ರೆಹಾನಾ ಕಳೆದ ಒಂದು ವರ್ಷದಿಂದ ಸಂಬಂಧದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ರೆಹಾನಾ ಮತ್ತು ಸಲಾಂ ನಡುವೆ ಸಂಬಂಧದ ವಿಚಾರವಾಗಿ ಆಗಾಗ್ಗೆ ಮನಸ್ತಾಪ ಉಂಟಾಗುತ್ತಿತ್ತು. ರೆಹಾನಾ ಮತ್ತೊಬ್ಬ ವ್ಯಕ್ತಿಯೊಂದಿಗೆ ಆತ್ಮೀಯವಾಗಿದ್ದರೆಂಬ ವಿಚಾರವೂ ಇಬ್ಬರ ನಡುವಿನ ಜಗಳಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಇದರ ನಡುವೆ ರೆಹಾನಾ ತನ್ನನ್ನು ಮದುವೆಯಾಗುವಂತೆ ಸಲಾಂ ಮೇಲೆ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ. ಇದೇ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಾದ ತೀವ್ರಗೊಂಡ ಬಳಿಕ ಸಲಾಂ ರೆಹಾನಾ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಬಾಡಿಗೆ ಮನೆಯಲ್ಲಿ ಈ ಕೃತ್ಯ ನಡೆದಿದ್ದು, ಗಂಭೀರವಾಗಿ ಗಾಯಗೊಂಡ ರೆಹಾನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹತ್ಯೆಯ ಬಳಿಕ ಪ್ರಕರಣವನ್ನು ಮುಚ್ಚಿಹಾಕಲು ಆರೋಪಿ ಆಕೆಯ ಮೃತದೇಹವನ್ನು ಗೋಣಿ ಚೀಲದೊಳಗೆ ಬಚ್ಚಿಟ್ಟು ನಂತರ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.






