ನಶಿಸುತ್ತಿರುವ ಕಲೆಯನ್ನು ಜೀವಂತವಾಗಿರಿಸುವ ಕಲಾವಿದರಿವರು..!

Views: 153
ಕನ್ನಡ ಕರಾವಳಿ ಸುದ್ದಿ: ನಮ್ಮ ನೆಲದ ಸಂಸ್ಕೃತಿಯೇ ಹಾಗೆ ವಿಭಿನ್ನ ಸಾಹಿತ್ಯ ಪ್ರಕಾರಗಳನ್ನು ಒಳಗೊಂಡಿದೆ. ಅದಕ್ಕಾಗಿಯೇ ನಮ್ಮ ಭಾರತ ದೇಶವನ್ನು ವಿವಿಧತೆಯಲ್ಲಿ ಏಕತೆ ಕಾಣುವ ದೇಶ ಅಂತ ಬಣ್ಣಿಸಿದ್ದು. ಹಾಗಾಗಿ ಕ್ರಮಿಸುವಾಗ ಒಂದು ಊರಿಂದ ಊರಿಗೆ, ಬಳಸುವ ಭಾಷೆ, ಸಂಪ್ರದಾಯ, ಆಚರಣೆ, ಪದ್ದತಿ ಹೀಗೆ ಬದಲಾಗುತ್ತಾ ಹೋಗುತ್ತದೆ. ಆದರೂ ಅಲ್ಲಲ್ಲಿ ಅದ್ಭುತ ಸಾಂಪ್ರದಾಯಿಕ ಆಚರಣೆಗಳು ನಮ್ಮ ಮುಂದಿನ ಪೀಳಿಗೆಗೆ, ಇಂದಿನ ತಲೆಮಾರಿಗೆ ಜೀವಂತವಾಗಿಡುವ ಕಲಾವಿದರು ನಮ್ಮ ಜೊತೆ ಇಂದಿಗೂ ಇದ್ದಾರೆ ಎಂಬುದು ಸಂತಸದ ವಿಷಯ.
ನಮ್ಮಲ್ಲಿ ಜಾನಪದ,ತತ್ವಪದ, ಗೀಗೀ ಪದ, ಭಾವಗೀತೆ ಭಕ್ತಿಗೀತೆ,ಜೋಗುಳ, ಅನೇಕ ಪ್ರಕಾರಗಳನ್ನು ಹಾಡುವ ಅದ್ಭುತ ಗಾಯಕರು ಇದ್ದಾರೆ ಆದರೆ ಅವರಿಂದು ಎಲೆಮರೆಯ ಕಾಯಿಯಂತೆ ತೆರೆಮರೆಯಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸುತ್ತಲೇ ಇದ್ದಾರೆ ಯಾಕೆಂದರೆ ಅವರಿಗೊಂದು ಸೂಕ್ತ ವೇದಿಕೆ ಇಂದಿಲ್ಲವಾಗಿದೆ ಎಂಬುದೇ ಒಂದು ವಿಪರ್ಯಾಸ.
ನಮ್ಮ ಹಿರಿಯರ ಕಾಲದಲ್ಲಿ ಮತ್ತು ನಮ್ಮ ಕಾಲಕ್ಕೂ ಮುಂದುವರಿದಂತೆ ಮನೆಮುಂದೆ ಆಗೊಮ್ಮೆ ಈಗೊಮ್ಮೆ ಕಿಂದರಿಜೋಗಿ, ಭಾಗ್ಯದ ಬಳೆಗಾರ, ಬುಡಬುಡಿಕೆಯವರು, ಬಂದು ಶುಭವಾಗತೈತಿ..ಶುಭವಾಗತೈತಿ ಅಂದಾಗೆಲ್ಲ ನಮ್ಮ ಒಳಗೊಂದು ಸಕಾರಾತ್ಮಕ ಸಂಚಾರವಾಗುವ ವಿಷಯಗಳು ನಮ್ಮನ್ನು ಪ್ರೇರೇಪಿಸುತ್ತದೆ. ಆದರೆ ಮುಂದಿನ ನಮ್ಮ ಮಕ್ಕಳ ಕಾಲಕ್ಕೆ ಇವರನ್ನೆಲ್ಲ ಚಿತ್ರ ಪಟದಲ್ಲೋ, ದೂರದರ್ಶನ, ಮೊಬೈಲ್ ನಲ್ಲೋ ತೋರಿಸಿ ವಿವರಿಸಬೇಕಾದ ದುರದೃಷ್ಟಕರ ಸಂಗತಿ ಎದುರಾದರೂ ಅಚ್ಚರಿ ಏನಿಲ್ಲ.
ಇಂದಿಗೂ ಆ ಕಲಾವಿದರು ನಮ್ಮ ಮನೆಮುಂದೆ ಬಂದಾಗ ಅತ್ಯಂತ ಖುಷಿ ಮತ್ತು ಗೌರವದಿಂದ ಅವರ ಕಲೆಗೆ ಬೆಲೆ ನೀಡಿ ಸಾಧ್ಯವಾದರೆ ಗೌರವ ಕಾಣಿಕೆ ಸಲ್ಲಿಸಿದರೆ ಪುಣ್ಯ ವಂತು ಖಂಡಿತಾ ಬರುತ್ತದೆ. ಎಷ್ಟು ಚೆನ್ನಾಗಿ ಇವರ ತಾಳ, ಶ್ರುತಿ, ಗಾಯನ, ಉಡುಗೆ ತೊಡುಗೆ ಇರುತ್ತದೆ ಎಂದರೆ, ಕೆಲವರ ಪಾಶ್ಚಾತ್ಯ ಸಂಸ್ಕೃತಿಯ ಅವಸ್ಥೆಯ ನಡುವೆ ಇವರಿಗೆ ಇವರೇ ಸಾಟಿ ಎಂದೆನಿಸುತ್ತದೆ. ಇವರಲ್ಲಿ ಅನೇಕರು ತಮ್ಮ ಊರಿನಲ್ಲಿ ಮನೆಯಲ್ಲಿ ಒಂದಷ್ಟು ಹೊಲಗದ್ದೆಗಳು ಇದ್ದು ರೈತಾಪಿ ವರ್ಗ ದಿಂದ ಬಂದು, ವ್ಯವಸಾಯದ ಬಿಡುವಿನ ವೇಳೆಯಲ್ಲಿ ಇವರು ಊರೂರು ಸುತ್ತಿ ನಶಿಸುತ್ತಿರುವ ಕಲೆಯನ್ನು ಜೀವಂತವಾಗಿರಿಸುವ ಸತ್ಯ ನಿಷ್ಠೆಯನ್ನು ಹೊಂದಿದವರಾಗಿದ್ದಾರೆ. ಆದರೆ ಕೆಲವೊಮ್ಮೆ ಮನೆಮುಂದೆ ಯಾರಾದರೂ ಬಂದರೆ ಇಂದಿನ ಯುಗದಲ್ಲಿ ಒಮ್ಮೊಮ್ಮೆ ಯಾರನ್ನೂ ನಂಬುವುದು ಬಿಡುವುದು ಎಂಬ ಜಿಜ್ಞಾಸೆಯೂ ಕಾಡುತ್ತದೆ. ಆದರೂ ನಿಜಶರಣರ ರೀತಿ ಬಂದಾಗ ನಂಬಿಕೆ ಬಲವಾಗಿ ಅವಕಾಶ ನೀಡುವ ಅನೇಕ ಮಂದಿ ನಮ್ಮ ನಡುವೆ ಇರುವ ಶ್ರೇಷ್ಠ ವ್ಯಕ್ತಿಗಳು ಇದ್ದೆ ಇದ್ದಾರೆ. ಸಾವಿರಾರು ವರ್ಷಗಳ ಇತಿಹಾಸವಿರುವ ಈ ಎಲ್ಲಾ ಕಲೆ ಮುಂದಿನ ಪೀಳಿಗೆಗೆ ಉಳಿಸಲೇ ಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವೂ ಹೌದು ಅದು ಜವಾಬ್ದಾರಿ ಕೂಡ. ಹಾಗಾಗಿ ನಶಿಸುತ್ತಿರುವ ಕಲೆಯನ್ನು ಜೀವಂತವಾಗಿರಿಸುವ ಈ ಕಲಾವಿದರನ್ನು ಗುರುತಿಸಿ ಉಳಿಸೋಣ… ಬೆಳೆಸೋಣ.
——–ರಾಘವೇಂದ್ರ ಆಚಾರ್ಯ ಕೆದೂರು