ಧಾರ್ಮಿಕ

ಧರ್ಮಸ್ಥಳ: ಅಪಪ್ರಚಾರ ಖಂಡಿಸಿ ಶ್ರೀ ಕ್ಷೇತ್ರದಲ್ಲಿ ಕರವೇ ಮಹಿಳಾ ತಂಡದ ಉರುಳು ಸೇವೆ

Views: 118

ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳ ಕ್ಷೇತ್ರದ ಮೇಲೆ ನಡೆಯುತ್ತಿರುವ ಅಪಪ್ರಚಾರ ಕೊನೆಯಾಗಬೇಕು, ಅಪಪ್ರಚಾರ ಮಾಡುತ್ತಿರುವವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಪ್ರಾರ್ಥಿಸಿ ಜು.25ರಂದು ಮುಂಜಾನೆ ಬೆಂಗಳೂರು, ಮಂಡ್ಯ ಕರವೇ ಮಹಿಳಾ ತಂಡದ ಸದಸ್ಯರು ಉರುಳು ಸೇವೆ ಮಾಡಿದರು.

ಸುಮಾರು 40 ಜನ ಮಹಿಳೆಯರು ಬೆಳಿಗ್ಗೆ ಉರುಳು ಸೇವೆ ಮಾಡಿ ನಂತರ ದೇವರ ದರ್ಶನ ಪಡೆದು ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿರುವವರಿಗೆ ಶ್ರೀ ಮಂಜುನಾಥ ಸ್ವಾಮಿ ಸದ್ಬುದ್ಧಿಯನ್ನು ಕೊಡಲಿ ಹಾಗೂ ಸೌಜನ್ಯ ಪ್ರಕರಣ ಶೀಘ್ರ ಇತ್ಯರ್ಥವಾಗಲಿ, ಧರ್ಮಸ್ಥಳಕ್ಕೆ ಅಂಟಿರುವ ಕಂಟಕ ದೂರವಾಗಲಿ ಎಂದು ಕರವೇ ಮಹಿಳಾ ಘಟಕದ ವತಿಯಿಂದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಾನದಲ್ಲಿ ಉರುಳು ಸೇವೆ ಸಲ್ಲಿಸಿದರು.

ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಇತರ ಸಮೂಹ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವದಂತಿ ಹಾಗೂ ಅಪಪ್ರಚಾರ ತಡೆಯಲು ಮತ್ತು ಎಲ್ಲಾ ಪ್ರಕರಣಗಳು ಶೀಘ್ರ ಇತ್ಯರ್ಥವಾಗಲಿ ಎಂದು ಪ್ರಾರ್ಥಿಸಿದರು.

ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ಧರ್ಮಸ್ಥಳವು ಸತ್ಯ, ಧರ್ಮ, ನ್ಯಾಯ, ನೀತಿ ನೆಲೆ ನಿಂತ ಪುಣ್ಯಸ್ಥಳವಾಗಿದೆ.ದೇಶ-ವಿದೇಶಗಳಲ್ಲಿ ಧರ್ಮಸ್ಥಳದ ಲಕ್ಷಾಂತರ ಮಂದಿ ಭಕ್ತರಿದ್ದಾರೆ. ಇಂತಹ ಪವಿತ್ರ ಕ್ಷೇತ್ರಕ್ಕೆ ಅಪಪ್ರಚಾರ ಸಲ್ಲದು. ಈಗಾಗಲೆ ಸರಕಾರ ವಿಶೇಷ ತನಿಖಾ ತಂಡ ರಚಿಸಿದ್ದು, ಪ್ರಕರಣ ಶೀಘ್ರ ನ್ಯಾಯಯುತವಾಗಿ ಇತ್ಯರ್ಥವಾಗಲಿ ಎಂದು ಅವರು ದೇವರಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ.

ಸರಕಾರ ರಚಿಸಿರುವ ಎಸ್ ಐಟಿ ತಂಡ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಕಚೇರಿ ತೆರೆದಿದೆ. ವಿಶೇಷ ತನಿಖಾ ತಂಡ ಶುಕ್ರವಾರ ಸಂಜೆ ಬೆಳ್ತಂಗಡಿ ತಲುಪಿದೆ. ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕ ಪ್ರಣವ್ ಮೊಹಾಂತಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಸದ್ಯ ನೇಮಕಾತಿ ವಿಭಾಗದ ಡಿಐಜಿ ಎಂ.ಎನ್. ಅನುಚೇತ್ ಅವರ ನೇತೃತ್ವದಲ್ಲಿ ತಂಡವು ದಕ್ಷಿಣ ಕನ್ನಡಕ್ಕೆ ತೆರಳಿದೆ. ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಭಾಗದ 20 ಮಂದಿ ಅಧಿಕಾರಿಗಳನ್ನು ವಿಶೇಷ ತನಿಖಾ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಕಂಪ್ಯೂಟರ್ ಸೇರಿದಂತೆ ತನಿಖೆಗೆ ಅನುಕೂಲವಾಗುವ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ

Related Articles

Back to top button