ತಂಗಿಯನ್ನು ಚುಡಾಯಿಸಿ, ತಾಯಿಯ ಬಗ್ಗೆ ಕೆಟ್ಟದಾಗಿ ಮಾತನಾಡಿಕ್ಕೆ ಕೊಲೆ :ಅಣ್ಣ ಸೇರಿ ಇಬ್ಬರ ಸೆರೆ

Views: 55
ಬೆಂಗಳೂರು,-ತಂಗಿಯನ್ನು ಚುಡಾಯಿಸಿ, ತಾಯಿಯ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದರಿಂದ ಆಕ್ರೋಶಗೊಂಡು ಸ್ನೇಹಿತನನ್ನು ರೈಲ್ವೆ ಹಳಿ ಬಳಿ ಕರೆದೊಯ್ದು ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಕೊಲೆಗೈದು ಆತ್ಮಹತ್ಯೆಯಂತೆ ಬಿಂಬಿಸಿ ಸಾಕ್ಷ್ಯ ನಾಶ ಮಾಡಲು ಯತ್ನಿಸಿದ ಅಣ್ಣ ಸೇರಿ ಇಬ್ಬರನ್ನು ಬಂಧಿಸುವಲ್ಲಿ ರೈಲ್ವೆ ಪೊಲೀಸರು ಯಶಸ್ವಿಯಾಗಿದ್ದಾರೆ.
ರಾಮನಗರ ಟಿಪ್ಪುನಗರದ ನಿವಾಸಿ ಅರ್ಬಾಜ್ ಪಾಷ(24)ನನ್ನು ಕೊಲೆಗೈದು ಸಾಕ್ಷ್ಯ ನಾಶ ಮಾಡಿ ಪರಾರಿಯಾಗಿದ್ದ, ರಾಮನಗರದ ಝಾಕೀರ್(20)ಹಾಗೂ ಜಹೀರ್ ಅಲಿಯಾಸ್ ಕಾಲು(20)ಬಂಧಿತ ಆರೋಪಿಗಳಾಗಿದ್ಧಾರೆ ಎಂದು ರೈಲ್ವೆ ಎಸ್ ಪಿ ಡಾ.ಸೌಮ್ಯಲತಾ ಅವರು ತಿಳಿಸಿದ್ದಾರೆ.
ಕಳೆದ ಜ.21 ರಂದು ರಾಮನಗರ ರೈಲು ನಿಲ್ದಾಣದ ಬಳಿಯ ರೈಲ್ವೆ ಬಳಿ ಅಪರಿಚಿತ ಯುವಕನ, ಮೃತದೇಹದ ತಲೆಯ ಬಳಿ ರಕ್ತ-ಸಿಕ್ತ ಸೀಮೆಂಟ್ ಕಾಂಕ್ರೀಟ್ ಕಲ್ಲು ಕಂಡುಬಂದಿದ್ದು, ಸ್ಥಳದ ಸನ್ನಿವೇಶಗಳನ್ನು ನೋಡಲಾಗಿ ಸದರಿ ವ್ಯಕ್ತಿಯನ್ನು ಯಾರೋ ದುಷ್ಕರ್ಮಿಗಳು ದುರುದ್ದೇಶದಿಂದ ತಲೆಯ ಮೇಲೆ ಸೀಮೆಂಟ್ ಕಾಂಕ್ರೀಟ್ ಕಲ್ಲನ್ನು ಎತ್ತಿಹಾಕಿ ಕೊಲೆ ಮಾಡಿರುವುದಾಗಿ ಕಂಡುಬಂದಿತ್ತು.ಈ ಸಂಬಂಧ ನಗರ ರೈಲ್ವೆ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿ, ಮೃತನ ಪ್ಯಾಂಟ್ ಜೇಬಿನಲ್ಲಿ ದೊರೆತ ಚೀಟಿಯಲ್ಲಿನ ಮೊಬೈಲ್ ನಂಬರ್ ಆಧರಿಸಿ, ತನಿಖೆ ಮುಂದುವರೆಸಿ ಕೊಲೆಯಾದ ಯುವಕನ ರಾಮನಗರದ ಟಿಪ್ಪುನಗರದ ಅರ್ಬಾಜ್ ಪಾಷ ಎಂದು ಗುರುತಿಸಲಾಯಿತು.
ಪ್ರಕರಣದ ಪತ್ತೆಗೆ ರಚಿಸಿದ ವಿಶೇಷ ತಂಡಗಳು ವೈಯುಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಸ್ನೇಹಿತರೇ ಕೊಲೆ ಮಾಡಿರುವುದನ್ನು ಪತ್ತೆಹಚ್ಚಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿ ಕಾಲು ನ ತಂಗಿಯನ್ನು ಚುಡಾಯಿಸುತ್ತಾ ಹಾಗೂ ತಾಯಿಯ ಬಗ್ಗೆ ಕೆಟ್ಟದಾಗಿ ಆಶ್ಲೀಲ ಪದಗಳಿಂದ ಅರ್ಬಾಜ್ ಪಾಷ
ಮಾತನಾಡುತ್ತಿದ್ದ.ಹಲವು ಬಾರಿ ಬುದ್ಧಿ ಹೇಳಿದರೂ ಕಲಿಯದೇ ಇದ್ದರಿಂದ ಆಕ್ರೋಶಗೊಂಡ ಕಾಲು ಮತ್ತೊಬ್ಬ ಆರೋಪಿ ಝಾಕೀರ್ ಜೊತೆ ಸೇರಿ ಸಂಚು ರೂಪಿಸಿ ಅರ್ಬಾಜ್ ಪಾಷ ನನ್ನು ಮಾತನಾಡುವ ನೆಪದಲ್ಲಿ ರೈಲ್ವೆ ಹಳಿ ಬಳಿ ಕರೆದೊಯ್ದು ಕೊಲೆ ಮಾಡಿ ಸಾಕ್ಷ್ಯ ನಾಶ ಮಾಡಲು ಯತ್ನಿಸಿರುವುದನ್ನು ಬಾಯ್ಬಿಟ್ಟಿದ್ದಾನೆ ಎಂದು ಹೇಳಿದರು.
ರೈಲ್ವೆ ಸಿಬ್ಬಂದಿಗಳ ತಂಡವು ಕೃತ್ಯ ನಡೆದ 24ಗಂಟೆಗಳ ಒಳಗಾಗಿ ಮೃತನ ವಾರಸುದಾರರನ್ನು ಮತ್ತು ಕೊಲೆ ಮಾಡಿದ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ಪತ್ತೆ ಕಾರ್ಯವನ್ನು ರೈಲ್ವೆ ಉಪ ಪೊಲೀಸ್ ಮಹಾನಿರೀಕ್ಷಕ (ಡಿಐಜಿಪಿ)ಡಾ.ಶರಣಪ್ಪ ಅವರು ಶ್ಲಾಘಿಸಿದ್ದಾರೆ ಎಂದು ಸೌಮ್ಯಲತಾ ತಿಳಿಸಿದರು.