ಕೇವಲ 200ರೂಪಾಯಿಗೆ ಮೊಮ್ಮಗನನ್ನು ಮಾರಿದ ಅಜ್ಜಿ!

Views: 79
ಕನ್ನಡ ಕರಾವಳಿ ಸುದ್ದಿ: ನೋಡಿಕೊಳ್ಳಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ, ಆತನಿಗೆ ಉತ್ತಮ ಜೀವನ ಸಿಗಲು ಎಂಬ ಉದ್ದೇಶದಿಂದ ವೃದ್ಧ ಮಹಿಳೆಯೊಬ್ಬರು ತಮ್ಮ ಏಳು ವರ್ಷದ ಮೊಮ್ಮಗನನ್ನು ರೂ.200 ಕ್ಕೆ ಮಾರಿದ್ದಾರೆ ಎಂದು ಮಕ್ಕಳ ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಒಡಿಶಾದಲ್ಲಿ ನಡೆದಿರುವ ಈ ಘಟನೆಯು ಬದ್ಲಿಯಾ ಗ್ರಾಮದ ಸ್ಥಳೀಯರನ್ನು ಬೆಚ್ಚಿಬೀಳಿಸಿದ್ದು, ಪೊಲೀಸರು ತ್ವರಿತ ಕ್ರಮ ಕೈಗೊಂಡಿದ್ದಾರೆ. ನಂತರ, ಮಗುವನ್ನು ರಕ್ಷಿಸಿ ಮಕ್ಕಳ ಆರೈಕೆ ಕೇಂದ್ರಕ್ಕೆ ಕಳುಹಿಸಿದ್ದಾರೆ
ಮಾಂಡ್ ಸೊರೆನ್ ಎಂದು ಗುರುತಿಸಲಾದ ಮಹಿಳೆ ಮಗುವನ್ನು ಅಪರಿಚಿತ ದಂಪತಿಗಳಿಗೆ ಹಸ್ತಾಂತರಿಸಿದ್ದು, ಅವರು ಆತನಿಗೆ ಆಹಾರ, ಆಶ್ರಯ ಮತ್ತು ಶಿಕ್ಷಣವನ್ನು ಒದಗಿಸುತ್ತಾರೆ ಎಂದು ನಂಬಿದ್ದೆ ಎಂದು ಹೇಳಿರುವುದಾಗಿ ವರದಿಯಾಗಿದೆ.
65 ವರ್ಷದ ಸೊರೆನ್ ನಿರಾಶ್ರಿತರಾಗಿದ್ದರು, ಭೂಮಿ ಇರಲಿಲ್ಲ. ಅವರಿಗೆ ಯಾವುದೇ ಸರ್ಕಾರಿ ನೆರವು ಸಿಗುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಪತಿ ವರ್ಷಗಳ ಹಿಂದೆ ನಿಧನರಾಗಿದ್ದರು, ಅವರ ಮಗ ಕಾಣೆಯಾಗಿದ್ದು, ಸೊಸೆ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಸಾವನ್ನಪ್ಪಿದ್ದರು.
ಯಾವುದೇ ಬೆಂಬಲವಿಲ್ಲದೆ, ಸೊರೆನ್ ರಾಯ್ಪಾಲ್ ಗ್ರಾಮದಲ್ಲಿರುವ ತನ್ನ ಸಹೋದರಿಯ ಮನೆಗೆ ತೆರಳಿದರು. ಅಲ್ಲಿ ಅವರು ತಮ್ಮ ಮೊಮ್ಮಗನನ್ನು ನೋಡಿಕೊಳ್ಳುವಂತೆ ಬೇಡಿಕೊಳ್ಳಲು ಪ್ರಾರಂಭಿಸಿದರು. ಅವರ ಆರೋಗ್ಯ ಹದಗೆಟ್ಟಂತೆ, ಬಾಲಕನನ್ನು ಹಾರೈಕೆ ಮಾಡಲು ಹೆಣಗಾಡಿದರು. ಅಂತಿಮವಾಗಿ, ಮಗುವನ್ನು ಬೇರೆಯವರಿಗೆ ನೀಡಿದರು.
ಸ್ಥಳೀಯ ಪಂಚಾಯತ್ ಸದಸ್ಯರೊಬ್ಬರು ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ, ಪೊಲೀಸರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಮಗುವನ್ನು ಠಾಣೆಗೆ ಕರೆತರಲಾಯಿತು, ಅಲ್ಲಿ ಮಕ್ಕಳ ರಕ್ಷಣಾ ಇಲಾಖೆ ಮತ್ತು ರಸ್ಗೋವಿಂದ್‌ಪುರ ಮಕ್ಕಳ ಅಭಿವೃದ್ಧಿ ಯೋಜನಾ ಕಚೇರಿಯ ಅಧಿಕಾರಿಗಳು ಕುಟುಂಬದೊಂದಿಗೆ ಭೇಟಿಯಾದರು.
ತನಿಖೆಯ ನಂತರ, ಮಕ್ಕಳ ರಕ್ಷಣಾ ಅಧಿಕಾರಿಯೊಬ್ಬರು, “ಮಹಿಳೆ ಮಗುವನ್ನು ಆರ್ಥಿಕ ಲಾಭಕ್ಕಾಗಿ ಮಾರಾಟ ಮಾಡಿಲ್ಲ, ಬದಲಿಗೆ ಉತ್ತಮ ಆರೈಕೆಗಾಗಿ ದಂಪತಿಗಳಿಗೆ ನೀಡಿದ್ದಾಳೆ. ಏಕೆಂದರೆ, ಆಕೆ ಇನ್ನು ಮುಂದೆ ಮಗುವನ್ನು ನೋಡಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ನಾವು ವಿಚಾರಣೆಯಲ್ಲಿ ಕಂಡುಕೊಂಡಿದ್ದೇವೆ” ಎಂದು ಹೇಳಿದರು.
ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯ ಆರೈಕೆಯಲ್ಲಿ ಇರಿಸಲಾಗಿದ್ದು, ಈಗ ಬರಿಪಾದದಲ್ಲಿರುವ ಮಕ್ಕಳ ರಕ್ಷಣಾ ಕೇಂದ್ರದಲ್ಲಿದೆ.