ಕರಾವಳಿ ಪದ್ಮಶಾಲಿಗರ ಮೂಲ ಕ್ಷೇತ್ರ ಬಾರ್ಕೂರು: ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

Views: 576
ಬಾರ್ಕೂರು: ಕರಾವಳಿ ಪದ್ಮಶಾಲಿ/ ಶೆಟ್ಟಿಗಾರರ ಮೂಲ ಕ್ಷೇತ್ರ ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಡಿ.1 ರಂದು ನಡೆಯಿತು.
ನವೆಂಬರ್ 29ರಂದು ಆಮಂತ್ರಣ ಪತ್ರಿಕೆಯನ್ನು ಶ್ರೀ ದೇವರಿಗೆ ಅರ್ಪಿಸಿ ಪೂಜೆ ಪುನಸ್ಕಾರ ನಡೆಸಲಾಯಿತು.
ಶ್ರೀ ಕ್ಷೇತ್ರ ಬಾರ್ಕೂರು ದೇವಳದಲ್ಲಿ 8 ದಶಕಗಳ ಕಾಲ ಸಕ್ರಿಯವಾಗಿ ತೊಡಗಿಸಿಕೊಂಡ ಶಂಕರ ನಾರಾಯಣದ ಮಗ್ಗದ ಮೇಷ್ಟ್ರು ಗೋಪಾಲ ಶೆಟ್ಟಿಗಾರ ಅವರು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.
ಅವರು ಮಾತನಾಡಿ, 1954 ರಿಂದ ಈ ದೇವಸ್ಥಾನದಲ್ಲಿ ಸಕ್ರಿಯವಾಗಿದ್ದೇನೆ. ಸ್ವಾಮಿಯ ಸೇವೆಯಲ್ಲಿ ಸಂಪೂರ್ಣವಾಗಿ ತಲ್ಲೀನನಾಗಿದ್ದು, ನಾನು ಬರೀ ಸಾಧಕನಲ್ಲ ಸಮಾಜದಲ್ಲಿ ಹೋದ ಬಂದಲ್ಲಿ ನಮ್ಮನ್ನು ಕನಿಷ್ಠವಾಗಿ ನೋಡುತ್ತಿದ್ದರೂ ಸಹ ದೇವಸ್ಥಾನದಲ್ಲಿ ಸರ್ವಸ್ವವನ್ನು ಶ್ರೀ ದೇವರ ಅಭಿವೃದ್ಧಿಯಾಗಬೇಕೆಂದು ತೊಡಗಿಸಿಕೊಂಡಿದ್ದೇನೆ. ವ್ಯಕ್ತಿ ಪೂರ್ವಕವಾಗಿ ಕೆಲಸ ಮಾಡಿದ್ದೇನೆ ಎಂಬ ತೃಪ್ತಿ ನನಗಿದೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಎಲ್ಲರೂ ಸಂಪೂರ್ಣವಾಗಿ ತೊಡಗಿಸಿಕೊಳ್ಳಿ ಎಂದರು.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಎಚ್.ಎ ಗೋಪಾಲ್ ರವರು ಮಾತನಾಡಿ, ಫೆಬ್ರವರಿ 14 ರಿಂದ 20 ರವರೆಗೆ ದೇವಾಲಯದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ, ಹಾಲು ಹಬ್ಬ, ವಾರ್ಷಿಕ ಪೂಜೆ ಮತ್ತು ಗೆಂಡೆ ಸೇವೆಯಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ವಿನಂತಿಸಿದರು.
ಮುಖ್ಯ ಅತಿಥಿ ದಾಮೋದರ ಶರ್ಮ ಮಾತನಾಡಿ, ನಾವೆಲ್ಲರೂ ಸೇರಿ ಬ್ರಹ್ಮಕಲಶ ಶ್ರೀ ದೇವರ ಸೇವೆ ಮಾಡಿದರೆ ಮುಂದಿನ ತಲೆಮಾರಿಗೆ ನಾವು ಸೇವೆ ಮಾಡಿದ್ದೇವೆ ಎನ್ನುವ ಸುಖ, ಯಾವ ದುಡ್ಡು ಯಾವ ಶ್ರೀಮಂತಿಕೆ ಕೊಡುವುದಕ್ಕೆ ಸಾಧ್ಯವಿಲ್ಲ, ದೇವತಾ ಸನ್ನಿಧಾನದಲ್ಲಿ ಮಾಡುವ ಕೆಲಸ ಅದರ ಪ್ರತಿಫಲ ನಮಗೆ ನೀಡುತ್ತದೆ ನಾವೆಲ್ಲರೂ ನಮಗೆ ದೇವರು ಕೊಟ್ಟ ಕೆಲಸ ಅಂತ ಒಗ್ಗೂಡಿ ಕೆಲಸ ಮಾಡಬೇಕು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬಾರ್ಕೂರು ರಂಗನಕೆರೆ ಶ್ರೀನಿವಾಸ ಶೆಟ್ಟಿಗಾರ್ ಅವರು ಮಾತನಾಡಿ, ನಮ್ಮ ದೇವಸ್ಥಾನದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ತಾವೆಲ್ಲರೂ ಆಗಮಿಸಿ,ಶ್ರೀ ದೇವತಾ ಕಾರ್ಯಗಳಲ್ಲಿ ಭಾಗವಹಿಸಿ ಎಂದರು.
ದೇವಳದ ಆಡಳಿತ ಮೊಕ್ತೇಸರರಾದ ಡಾ.ಜಯರಾಮ ಶೆಟ್ಟಿಗಾರ ಅವರು ಮಾತನಾಡಿ, ಇತ್ತೀಚಿನ ಅವಧಿಯಲ್ಲಿ ಕರಾವಳಿ ಪದ್ಮಶಾಲಿಗರು ಆರಾಧಿಸಿಕೊಂಡು ಬಂದಿರುವ 15 ದೇವಸ್ಥಾನದವರು ಮೂಲ ಕ್ಷೇತ್ರಕ್ಕೆ ಬಂದು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ನಾವೆಲ್ಲರೂ ಒಗ್ಗಟ್ಟಾಗಿ ಸೇರಿ ಈ ದಾರ್ಮಿಕ ಕಾರ್ಯಕ್ರಮಗಳ ಮೂಲಕ ಐಕ್ಯಮತ್ಯ ಸಾಧಿಸಿ ಸಮಾಜ ಇನ್ನಷ್ಟು ಅಬಿವೃದ್ಧಿಯಾಗಬೇಕು ಎಂದರು.
ವೇದಿಕೆಯಲ್ಲಿ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ನಾರಾಯಣ ಶೆಟ್ಟಿಗಾರ ಸುರತ್ಕಲ್, ಸಂಘಟನಾ ಸಮಿತಿಯ ಗೌರವಾಧ್ಯಕ್ಷ ಪುರುಷೋತ್ತಮ ಶೆಟ್ಟಿಗಾರ್, ಸಂಘಟನಾ ಸಮಿತಿಯ ಅಧ್ಯಕ್ಷ ಆನಂದ್ ಶೆಟ್ಟಿಗಾರ್ ಚೇರ್ಕಾಡಿ, ಕೋಶಾಧಿಕಾರಿ ಅರುಣ್ ಕುಮಾರ ಶೆಟ್ಟಿಗಾರ್ ಉಪಸ್ಥಿತರಿದ್ದರು.
ದೇಗುಲದ ಕಾರ್ಯದರ್ಶಿ ಭಾಸ್ಕರ್ ಶೆಟ್ಟಿಗಾರ್ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ಡಾ. ಶಿವಪ್ರಸಾದ್ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು. ಸಹ ಮೊಕ್ತೇಸರರಾದ ಕೊಡ್ಲಾಡಿ ರಾಮ ಶೆಟ್ಟಿಗಾರ ವಂದಿಸಿದರು.