ರಾಜಕೀಯ

ರಾಜ್ಯ ಬಿಜೆಪಿ ನೂತನ ಸಾರಥಿ ವಿಜಯೇಂದ್ರಗೆ ಪಟ್ಟಾಭಿಷೇಕ

ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷರಾಗಿ ಶಾಸಕ ಬಿ.ವೈ. ವಿಜಯೇಂದ್ರರವರು ಇಂದು ಮಲ್ಲೇಶ್ವರಂನ ಪಕ್ಷದ ಕಚೇರಿಯಲ್ಲಿ ಸಂಸದ, ಹಿಂದಿನ ಅಧ್ಯಕ್ಷ ನಳೀನ್‌ಕುಮಾರ್ ಕಟೀಲು ಅವರಿಂದ ಅಧಿಕಾರ ಸ್ವೀಕರಿಸಿದರು. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಂಸದ ಡಿ.ವಿ. ಸದಾನಂದಗೌಡ, ಮಾಜಿ ಸಚಿವ ಗೋವಿಂದಕಾರಜೋಳ ಅವರು ಉಪಸ್ಥಿತರಿದ್ದರು.

Views: 0

ಬೆಂಗಳೂರು: ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ.ವೈ. ವಿಜಯೇಂದ್ರ ಇಂದು ಅಧಿಕಾರ ಸ್ವೀಕರಿಸಿದರು.

ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿ.ವೈ. ವಿಜಯೇಂದ್ರ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಪಕ್ಷದ ಪ್ರಮುಖ ಮುಖಂಡರುಗಳ ಉಪಸ್ಥಿತಿ ಹಾಗೂ ಕಾರ್ಯಕರ್ತರ ಉತ್ಸಾಹ, ಭಾರೀ ಸಂಭ್ರಮದ ನಡುವೆ ರಾಜ್ಯ ಬಿಜೆಪಿ ಅಧ್ಯಕ್ಷ ಹುದ್ದೆ ಪದಗ್ರಹಣ ಮಾಡಿದರು.

ರಾಜ್ಯ ಬಿಜೆಪಿಯ ನಿರ್ಗಮಿತ ಅಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಅವರು ನೂತನ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಪಕ್ಷದ ಧ್ವಜವನ್ನು ನೀಡುವ ಮೂಲಕ ಅಧಿಕಾರ ಹಸ್ತಾಂತರ ಮಾಡಿದರು. ಹಾಗೆಯೇ ಆವರಿಗೆ ಹಾರ ಹಾಕಿ ಕೇಸರಿ ಶಾಲು ಹೊದಿಸಿ ಸನ್ಮಾನ ಮಾಡಿದರು.

ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ವಿಜಯೇಂದ್ರ ಅವರು ಪಕ್ಷದ ಕಚೇರಿಯಲ್ಲಿರುವ ಅಧ್ಯಕ್ಷರ ಕೊಠಡಿಗೆ ತೆರಳಿ ಅಧ್ಯಕ್ಷ ಕುರ್ಚಿಯಲ್ಲಿ ಕುಳಿತು ಪಕ್ಷದ ಕಟ್ಟಳೆಗಳಂತೆ ಅಧಿಕಾರ ಪದಗ್ರಹಣದ ಪ್ರಮಾಣ ಪತ್ರಕ್ಕೆ ಸಹಿ ಹಾಕುವ ಮೂಲಕ ರಾಜ್ಯದಲ್ಲಿ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿಯನ್ನು ವಹಿಸಿಕೊಂಡರು.

ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಹಿರಿಯ ನಾಯಕರುಗಳಾದ ಡಿ.ಹೆಚ್. ಶಂಕರಮೂರ್ತಿ, ಗೋವಿಂದ ಕಾರಜೋಳ, ಕೆ.ಎಸ್. ಈಶ್ವರಪ್ಪ, ರಾಮಚಂದ್ರಗೌಡ, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಡಿ.ವಿ. ಸದಾನಂದಗೌಡ, ಬಿ.ವೈ. ರಾಘವೇಂದ್ರ, ತೇಜಸ್ವಿ ಸೂರ್ಯ ಸೇರಿದಂತೆ ಬಹುತೇಕ ಸಂಸದರು, ಶಾಸಕರುಗಳು ನೂತನ ಅಧ್ಯಕ್ಷ ಪದಗ್ರಹಣ ಸಮಾರಂಭದಲ್ಲಿ ಭಾಗಿಯಾಗಿದ್ದರು.

ರಾಜ್ಯದ ಕೆಲವು ಹಿರಿಯ ನಾಯಕರುಗಳಿಗೆ ರಾಜಸ್ಥಾನ ಮತ್ತು ಮಧ್ಯಪ್ರದೇಶದ ಚುನಾವಣೆಯ ಜವಾಬ್ದಾರಿ ಇರುವ ಹಿನ್ನೆಲೆಯಲ್ಲಿ ಸಿ.ಟಿ. ರವಿ ಸೇರಿದಂತೆ ಕೆಲ ಹಿರಿಯ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ. ಉಳಿದಂತೆ ಬಿಜೆಪಿಯ ಬಹುತೇಕ ಶಾಸಕರು ಹಾಗೂ ಸಾವಿರಾರು ಕಾರ್ಯಕರ್ತರು ನೂತನ ಅಧ್ಯಕ್ಷ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಹೋಮ-ಹವನ

ನೂತನ ಅಧ್ಯಕ್ಷ ಪದಗ್ರಹಣ ಸಮಾರಂಭದ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಯಲ್ಲಿಂದು ಹೋಮ-ಹವನಗಳನ್ನು ಹಮ್ಮಿಕೊಳ್ಳಲಾಗಿತ್ತು.

ನೂತನ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಈ ಹೋಮ ಹವನದಲ್ಲೂ ಭಾಗಿಯಾದರು.

ಅದ್ದೂರಿ ಸ್ವಾಗತ

ಇದಕ್ಕೂ ಮೊದಲ ಪಕ್ಷದ ಕಚೇರಿಗೆ ಬೆಳಿಗ್ಗೆ 9.30ಕ್ಕೆ ಸರಿಯಾಗಿ ಆಗಮಿಸಿದ ವಿಜಯೇಂದ್ರ ಅವರಿಗೆ ಪೂರ್ಣಕುಂಭ ಕಳಶದೊಂದಿಗೆ ಸುಮಂಗಲಿಯರು ಸ್ವಾಗತ ಕೋರಿದರು. ವಿವಿಧ ಯಕ್ಷಗಾನ ಸೇರಿದಂತೆ ಜಾನಪದ ತಂಡಗಳು ಸ್ವಾಗತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಕಣ್ಮನ ಸೆಳೆಯಿತು.

ಪಕ್ಷ, ಪ್ರಧಾನಿ ಮೋದಿ, ಯಡಿಯೂರಪ್ಪ ಮತ್ತು ವಿಜಯೇಂದ್ರ ಪರ ಜೈಕಾರದ ಘೋಷಣೆಗಳು ಮುಗಿಲು ಮುಟ್ಟಿದ್ದವು.

ಪಕ್ಷದ ಕಚೇರಿಗೆ ಆಗಮಿಸುತ್ತಿದ್ದಂತೆ ವಿಜಯೇಂದ್ರ ಅವರು ಪಕ್ಷದ ಕಚೇರಿ ಮುಂಭಾಗದಲ್ಲಿ ಗೋಪೂಜೆಯನ್ನು ನೆರವೇರಿಸಿ, ನಂತರ ಹೋಮ-ಹವನದಲ್ಲಿ ಭಾಗಿಯಾದರು.

ಕಳೆದ ಶುಕ್ರವಾರ ಬಿ.ವೈ. ವಿಜಯೇಂದ್ರ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದ್ದರು.

ಅದಾದ ನಂತರ ವಿಜಯೇಂದ್ರ ಅವರು ಪಕ್ಷದ ಬೂತ್ ಮಟ್ಟದ ಅಧ್ಯಕ್ಷರು, ಕಾರ್ಯಕರ್ತರು, ಪ್ರಮುಖ ಮುಖಂಡರು ಹಾಗೂ ದೇಗುಲ, ಮಠ ಮಾನ್ಯಗಳಿಗೂ ಭೇಟಿ ನೀಡಿದ್ದರು.

ಇಂದು ಅವರು ಪಕ್ಷದ ಅಧ್ಯಕ್ಷರಾಗಿ ಪದಗ್ರಹಣ ಮಾಡುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಸಂಸದ ತೇಜಸ್ವಿ ಸೂರ್ಯ, ಬಿ.ವೈ. ರಾಘವೇಂದ್ರ, ಲೆಹರ್‌ಸಿಂಗ್, ಗೋವಿಂದ ಕಾರಜೋಳ, ಹಲವು ಶಾಸಕರುಗಳು ಹಾರ ಹಾಕಿ ಅಭಿನಂದಿಸಿದರು.

ಹಾಗೆಯೇ ನಿರ್ಗಮಿತ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಸಿಹಿ ತಿನಿಸಿ ಅಭಿನಂದಿಸಿದರು.

ಸಂಭ್ರಮ, ಉತ್ಸಾಹ

ಬಿ.ವೈ. ವಿಜಯೇಂದ್ರ ಅವರು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಪದಗ್ರಹಣ ಮಾಡುತ್ತಿದ್ದಂತೆಯೆ ಕಾರ್ಯಕರ್ತರು, ಮುಖಂಡರಲ್ಲಿ ಸಂಭ್ರಮ, ಉತ್ಸಾಹ ಮನೆ ಮಾಡಿತ್ತು.

ಬಿಜೆಪಿ ಕಚೇರಿಯ ಮುಂದೆ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದು, ಪಕ್ಷದ ಬಾವುಟ ಹಿಡಿದು ಜೈಕಾರಗಳನ್ನು ಕೂಗಿ, ನೃತ್ಯ ಮಾಡುತ್ತಾ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಪಕ್ಷದ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿ, ಹೊರ ಬಂದ ನೂತನ ಅಧ್ಯಕ್ಷ ವಿಜಯೇಂದ್ರ ಅವರಿಗೆ ಬೃಹತ್ ಸೇಬಿನ ಹಾರ ಹಾಕಿದ್ದು ವಿಶೇಷವಾಗಿತ್ತು.

ಕೆಲವರ ಗೈರು

ರಾಜ್ಯಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ವಿ. ಸೋಮಣ್ಣ, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ಸೇರಿದಂತೆ ಕೆಲ ಅಸಮಾಧಾನಿತ ಮುಖಂಡರು ಭಾಗಿಯಾಗಿರಲಿಲ್ಲ. ಮಧ್ಯಪ್ರದೇಶದ ಚುನಾವಣಾ ಪ್ರಚಾರದಲ್ಲಿರುವ ಸಿ.ಟಿ ರವಿ ಅವರು ಅಲ್ಲಿಂದಲೇ ವಿಜಯೇಂದ್ರರವರಿಗೆ ವೀಡಿಯೊ ಸಂದೇಶದ ಮೂಲಕ ಶುಭ ಕೋರಿದರು.

ಚುನಾವಣೆಯಲ್ಲಿ ತಕ್ಕ ಉತ್ತರ

ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ರೈತರ ಸಮಸ್ಯೆಗೆ ಸ್ಪಂದಿಸದೆ ಅಧಿಕಾರ ದರ್ಪ, ಮದ, ಉದ್ಧಟತನದಿಂದ ವರ್ತಿಸುತ್ತಿರುವ ರಾಜ್ಯದ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ನೀಡೋಣ ಎಂದು ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.

ಬಿಜೆಪಿ ಕಚೇರಿಯಲ್ಲಿಂದು ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳಾಗಿದೆ. ಹಗಲು ದರೋಡೆ, ಭ್ರಷ್ಟಾಚಾರ ಮಿತಿ ಮೀರಿದೆ ಎಂದು ದೂರಿದರು.

ಬಿಜೆಪಿ ಅಧಿಕಾರಿದಲ್ಲಿದ್ದಾಗ ಶೇ. 40ರಷ್ಟು ಕಮಿಷನ್ ಸರ್ಕಾರ ಎಂದು ಟೀಕಿಸಿದ್ದ ಕಾಂಗ್ರೆಸ್‌ನವರು ಶೇ. 40ರ ಕಮಿಷನ್ ಆರೋಪವನ್ನು ಅನುಷ್ಠಾನ ಮಾಡುತ್ತಿದ್ದಾರೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಬರ ಇದ್ದರೂ ಜಿಲ್ಲಾ ಉಸ್ತುವಾರಿ ಸಚಿವರ್‍ಯಾರು ಬರ ಪ್ರದೇಶಗಳಲ್ಲಿ ಪ್ರವಾಸ ಮಾಡುತ್ತಿಲ್ಲ. ಬರಪೀಡಿತ ಸ್ಥಳಗಳಿಗೆ ತೆರಳಿ ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ದರ್ಪದಿಂದ ಮೆರೆಯುತ್ತಿದ್ದಾರೆ. ಈ ಕಾಂಗ್ರೆಸ್ ಸರ್ಕಾರಕ್ಕೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತೇವೆ ಎಂದರು.

ಮುಂದೆ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಚುನಾವಣೆಗಳಿವೆ. ಅದನ್ನು ನಾವೆಲ್ಲ ಗಂಭೀರವಾಗಿ ಪರಿಗಣಿಸಿದ್ದೇವೆ. ಜತೆಗೆ ಲೋಕಸಭಾ ಚುನಾವಣೆಯಲ್ಲೂ 28 ಕ್ಷೇತ್ರ ಗೆಲ್ಲುವ ಗುರಿಯೊಂದಿಗೆ ಕೆಲಸ ಮಾಡುವ ಸಂಕಲ್ಪ ತಮ್ಮದು ಎಂದು ಹೇಳಿ ರಾಜ್ಯವನ್ನು ಬಿಜೆಪಿ ಭದ್ರಕೋಟೆ ಮಾಡಲು ಶ್ರಮಿಸುತ್ತೇನೆ ಎಂದರು. ನಾವೇನೂ ಆಪರೇಷನ್ ಕಮಲ ಮಾಡುವುದಿಲ್ಲ, ಆಡಳಿತ ಪಕ್ಷದ ಸಂಸದರಿಗೆ ಅನುದಾನ ಇಲ್ಲದೆ ಅವರೇ ರಸ್ತೆಯಲ್ಲಿ ಓಡಾಡಿದ ಪರಿಸ್ಥಿತಿ ಇದೆ, ಈ ದುಷ್ಟ ಸರ್ಕಾರಕ್ಕೆ ಕಾಂಗ್ರೆಸ್ ಶಾಸಕರೇ ಪಾಠ ಕಲಿಸುತ್ತಾರೆ ಎಂದರು.

ಎಲ್ಲ ಹಿರಿಯ ಕಿರಿಯ ಮುಖಂಡರು, ಸಂಘ ಪರಿವಾರದವರ ಮಾರ್ಗದರ್ಶನದಲ್ಲಿ ಹಗಲು ರಾತ್ರಿ ರಾಜ್ಯಾದ್ಯಂತ ಪ್ರವಾಸ ಮಾಡಿ ಬಿಜೆಪಿಗೆ ಶಕ್ತಿ ತುಂಬುತ್ತೇನೆ,. ಬಡವರ ಪರವಾಗಿ ದನಿ ಎತ್ತುವೆ. ಭ್ರಷ್ಟ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುವುದಾಗಿಯೂ ಅವರು ಹೇಳಿದರು.

ರಾಷ್ಟ್ರೀಯ ನಾಯಕರುಗಳು ನನ್ನ ಮೇಲೆ ವಿಶ್ವಾಸವಿಟ್ಟು ಪಕ್ಷದ ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ. ಅವರ ವಿಶ್ವಾಸ ಉಳಿಸಿಕೊಳ್ಳುವ ಕೆಲಸ ಮಾಡುವೆ ಎಂದು ವಿಜಯೇಂದ್ರ ಹೇಳಿ ಎಲ್ಲ ನಾಯಕರುಗಳ ಸಹಕಾರವನ್ನು ಕೋರಿದರು.

Related Articles

Back to top button
error: Content is protected !!