ಪ್ರತಿಪಕ್ಷ ನಾಯಕ ಸ್ಥಾನದತ್ತ ಆಕಾಂಕ್ಷಿಗಳ ಚಿತ್ತ: ಬಿಜೆಪಿಯಲ್ಲಿ ಹಲವು ಲೆಕ್ಕಾಚಾರ

Views: 0
ಬೆಂಗಳೂರು: ಬಹಳಷ್ಟು ನಿರೀಕ್ಷೆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆಯನ್ನು ಯುವ ನಾಯಕ ಹಾಗೂ ವೀರಶೈವ ಲಿಂಗಾಯತ ಸಮುದಾಯದ ಬಿ.ವೈ.ವಿಜಯೇಂದ್ರ ಮೂಲಕ ವರಿಷ್ಠರು ಭರ್ತಿ ಮಾಡಿದ್ದು, ಈಗ ಪ್ರತಿಪಕ್ಷ ನಾಯಕನ ಆಯ್ಕೆಯತ್ತ ಆಕಾಂಕ್ಷಿಗಳ ಚಿತ್ತ ನೆಟ್ಟಿದೆ.
ನಾ.17 ರಂದು ಬಿಜೆಪಿ ಸಭೆ ನಡೆಯಲಿದೆ, ವಿಧಾನಮಂಡಲದ ವಿಧಾನಸಭಾ, ವಿಧಾನಪರಿಷತ್ ಪ್ರತಿಪಕ್ಷ ನಾಯಕರ ಹುದ್ದೆಗಳನ್ನು ಇತರ ಹಿಂದುಳಿದ ವರ್ಗ ಮತ್ತು ದಲಿತ ಸಮುದಾಯಗಳಿಗೆ ಹಂಚಿಕೆ ಮಾಡುವ ಸಾಧ್ಯತೆಗಳಿವೆ. ಉಪನಾಯಕ, ಪ್ರತಿಪಕ್ಷದ ಮುಖ್ಯ ಸಚೇತಕ, ರಾಜ್ಯ ಪದಾಧಿಕಾರಿಗಳ ನೇಮಕ ಸಂದರ್ಭದಲ್ಲಿ ಒಕ್ಕಲಿಗರನ್ನು ಪರಿಗಣಿಸುವ ಸಂಭವವಿದೆ ಎಂಬ ತರ್ಕವಿದೆ.
ಹಿರಿತನ ಹಾಗೂ ಪಕ್ಷದ ಸಾಮಾನ್ಯ ಕಾರ್ಯಕರ್ತ ಕೋಟಾದಲ್ಲಿ ಆರ್.ಅಶೋಕ್, ಎಸ್.ಸುರೇಶ್ ಕುಮಾರ್, ಒಕ್ಕಲಿಗರ ಕೋಟಾದಲ್ಲಿ ಮತ್ತೆ ಆರ್ ಅಶೋಕ್, ಡಾ.ಸಿ.ಎನ್.ಅಶ್ವತ್ಥನಾರಾಯಣ, ಒಬಿಸಿ ಲೆಕ್ಕಾಚಾರದಲ್ಲಿ ವಿ.ಸುನಿಲ್ ಕುಮಾರ್ ಹೆಸರುಗಳು ಕೇಳಿಬರುತ್ತಿವೆ. ಮೇಲ್ಮನೆಗೆ ಕೋಟ ಶ್ರೀನಿವಾಸ ಪೂಜಾರಿ, ತೇಜಸ್ವಿನಿ ರಮೇಶ್, ಎನ್.ರವಿಕುಮಾರ್, ಛಲವಾದಿ ನಾರಾಯಣಸ್ವಾಮಿ ಹೆಸರು ಚರ್ಚೆಯಲ್ಲಿದ್ದು, ಪಕ್ಷದೊಳಗೆ ಸಾಕಷ್ಟು ಕುತೂಹಲ ಹುಟ್ಟಿಹಾಕಿದೆ.
ಪ್ರತಿಪಕ್ಷ ನಾಯಕರ ಹುದ್ದೆಗಳು ಒಬಿಸಿ, ದಲಿತ ಸಮುದಾಯಗಳಿಗೆ ಹಂಚಿದರೆ, ಪಕ್ಷದ ರಾಜ್ಯ ಪದಾಧಿಕಾರಿಗಳ ಹುದ್ದೆಗಳಲ್ಲಿ ಹೆಚ್ಚು ಪಾಲು ಸಿಗಬಹುದು ಎಂದು ಅಂದಾಜಿಸಿ ಒಕ್ಕಲಿಗ ಸಮುದಾಯದ ಎರಡನೇ ಹಂತದ ನಾಯಕರು ತೆರೆಮರೆಯ ಪ್ರಯತ್ನ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.







