ಇತರೆ

ಗ್ಯಾರಂಟಿ ಸಮಾವೇಶ ಮುಗಿಸಿ ಮರಳುತ್ತಿದ್ದ ಬಸ್ಸಿಗೆ ಆನೆಗುಡ್ಡೆ ಗೋಪುರದ ಬಳಿ ಟ್ಯಾಂಕರ್ ಡಿಕ್ಕಿ:ತ್ರಾಸಿಯಿಂದ ಬಂದ ಹಲವರಿಗೆ ಗಾಯ

Views: 49

ಕನ್ನಡ ಕರಾವಳಿ ಸುದ್ದಿ: ಕಾಂಗ್ರೆಸ್ ಗ್ಯಾರಂಟಿ ಸಮಾವೇಶ ಮುಗಿಸಿ ಮರಳುತ್ತಿದ್ದ ಪ್ರಯಾಣಿಕರಿಗೆ ಆನೆಗುಡ್ಡೆ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪ್ರವಾಸಿ ಬಸ್ಸೊಂದು ಅಪಘಾತಕ್ಕೀಡಾಗಿದೆ. ಎರಡು ಬುಲೆಟ್ ಟ್ಯಾಂಕರ್‌ಗಳ ಪೈಕಿ ಒಂದು ಟ್ಯಾಂಕರ್ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ. ಬಸ್ಸಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಆದರೆ, ಬಸ್ಸಿನಲ್ಲಿದ್ದ 30 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕುಂಭಾಶಿ ಆನೆಗುಡ್ಡೆ ಗೋಪುರದ ಬಳಿ ಈ ಘಟನೆ ನಡೆದಿದೆ. ತ್ರಾಸಿಯಿಂದ ಸುಮಾರು 30 ಮಂದಿ ಪ್ರಯಾಣಿಕರನ್ನು ಕರೆತಂದಿದ್ದ ಪ್ರವಾಸಿ ಬಸ್, ಉಡುಪಿಯಲ್ಲಿ ನಡೆದ ಕಾಂಗ್ರೆಸ್ ಗ್ಯಾರಂಟಿ ಸಮಾವೇಶದಲ್ಲಿ ಭಾಗವಹಿಸಿತ್ತು.

ಸಮಾವೇಶ ಮುಗಿದ ಬಳಿಕ ಊರಿಗೆ ಮರಳುವ ಮಾರ್ಗದಲ್ಲಿ ಪ್ರಯಾಣಿಕರು ಕುಂದಾಪುರದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಊಟ ಮುಗಿಸಿದ್ದರು. ಬಳಿಕ ತ್ರಾಸಿಯತ್ತ ಪ್ರಯಾಣ ಮುಂದುವರಿಸಲು ದೇವಸ್ಥಾನದ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಬಂದು, ಕುಂದಾಪುರದ ಕಡೆಗೆ ಹೋಗಲು ಚಾಲಕ ಬಸ್ಸನ್ನು ತಿರುಗಿಸುತ್ತಿದ್ದಾಗ ಅಪಘಾತ ಸಂಭವಿಸಿದೆ.

ಮಂಗಳೂರಿನಿಂದ ಕುಂದಾಪುರದತ್ತ ಎರಡು ಬುಲೆಟ್ ಟ್ಯಾಂಕರ್‌ಗಳು ವೇಗವಾಗಿ ಬರುತ್ತಿದ್ದವು. ಈ ಪೈಕಿ ಒಂದು ಟ್ಯಾಂಕರ್ ಬಸ್ಸಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸಿದೆ. ಆದರೂ ನಿಯಂತ್ರಣ ತಪ್ಪಿದ ಟ್ಯಾಂಕರ್ ಬಸ್ಸಿನ ಬಲಭಾಗಕ್ಕೆ ಬಲವಾಗಿ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಅಪ್ಪಳಿಸಿ ನಿಂತಿದೆ. ಪರಿಣಾಮ ಬಸ್ಸಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಬಸ್ಸಿನಲ್ಲಿದ್ದ ಹಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಎಲ್ಲಾ 30 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕುಂದಾಪುರ ಸಂಚಾರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

Related Articles

Back to top button
error: Content is protected !!