ಕಂಟೇನರ್ ಟ್ರಕ್ ಮತ್ತು ಮಿನಿ ಬಸ್ ನಡುವೆ ಮುಖಾಮುಖಿ ಡಿಕ್ಕಿ: 23 ಮಂದಿ ಸಾವು
Views: 61
ಕನ್ನಡ ಕರಾವಳಿ ಸುದ್ದಿ: ಕಂಟೇನರ್ ಟ್ರಕ್ ಮತ್ತು ಮಿನಿ ಬಸ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಕನಿಷ್ಠ 23 ಮಂದಿ ಮೃತಪಟ್ಟಿರುವ ಭೀಕರ ಘಟನೆ ಅಸ್ಸಾಂನ ಕಾಜಿರಂಗದಲ್ಲಿ ಶುಕ್ರವಾರ ನಡೆದಿದೆ.
ಮೃತಪಟ್ಟವರಲ್ಲಿ ಬಹುತೇಕರು ವಿದ್ಯಾರ್ಥಿಗಳು ಎಂದು ವರದಿಯಾಗಿದೆ. ನಜ್ಜುಗುಜ್ಜಾದ ವಾಹನದಲ್ಲಿ ಇನ್ನೂ ಕೆಲವರು ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಹೀಗಾಗಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.
ಮಿನಿ ಬಸ್ ಬೊಕಾಖಾಟ್ನಿಂದ ನಾಗಾಂವ್ ಕಡೆಗೆ ಪ್ರಯಾಣಿಸುತ್ತಿದ್ದಾಗ ಈ ಭೀಕರ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಪ್ರಯಾಣಿಕರಿದ್ದ ಮಿನಿ ಬಸ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ವಾಹನದೊಳಗೆ ಹಲವರು ಸಿಲುಕಿಕೊಂಡಿದ್ದರು. ವರದಿಗಳ ಪ್ರಕಾರ, ಆ ವಾಹನದಲ್ಲಿ 35ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಘಟನೆ ನಡೆದ ತಕ್ಷಣ ಸ್ಥಳೀಯರು ಮತ್ತು ಪೊಲೀಸ್ ಸಿಬ್ಬಂದಿ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಗಾಯಾಳುಗಳನ್ನು ತಕ್ಷಣವೇ ಕೊಹೊರಾ ಮಾಡೆಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜೋರ್ಹತ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಗಿದೆ.






