ಭೀಕರ ಅಪಘಾತ: ಒಂದೂವರೆ ವರ್ಷದ ಮಗು ಸೇರಿ ಮೂವರ ದುರ್ಮರಣ
Views: 44
ಕನ್ನಡ ಕರಾವಳಿ ಸುದ್ದಿ: ಬೈಕ್ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದೂವರೆ ವರ್ಷದ ಮಗು ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಧರ್ಮಸಾಗರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ನಡೆದಿದೆ.
ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಮೆಟ್ರಿ ಗ್ರಾಮದ ನಿವಾಸಿಗಳಾದ ತಾಯಮ್ಮ (55), ಜ್ಯೋತಿ (28) ಹಾಗೂ ಒಂದೂವರೆ ವರ್ಷದ ಮಗು ದಿವ್ಯ ಮೃತ ದುರ್ದೈವಿಗಳು. ಅಪಘಾತದಲ್ಲಿ ಲಕ್ಷ್ಮಣ್ ಹಾಗೂ ಅವರ ಪುತ್ರಿ ಸೃಷ್ಟಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೆಟ್ರಿ ಗ್ರಾಮದ ಲಕ್ಷ್ಮಣ್ ಅವರ ಕುಟುಂಬದವರು ಹೊಸಪೇಟೆ ತಾಲೂಕಿನ ಕೊಟಗಿನಾಳ್ ಗ್ರಾಮದಲ್ಲಿ ನಡೆದ ಶುಭಕಾರ್ಯದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮ ಮುಗಿಸಿ, ಇಬ್ಬರು ಮಕ್ಕಳು ಸೇರಿ ಐದು ಜನರು ಒಂದೇ ಬೈಕ್ನಲ್ಲಿ ಮೆಟ್ರಿ ಗ್ರಾಮಕ್ಕೆ ವಾಪಸ್ಸಾಗುತ್ತಿದ್ದರು. ಈ ವೇಳೆ ಧರ್ಮಸಾಗರ ಗ್ರಾಮದ ಬಳಿ ವೇಗವಾಗಿ ಬಂದ ಕಾರು ಬೈಕ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.






