ಇತರೆ

ಮಗಳ ಅಂತರ್ಜಾತಿ ಪ್ರೇಮ ವಿವಾಹಕ್ಕೆ ನೆರವಾಗಿದ್ದ ಜ್ಯೋತಿಷಿಯ ಭೀಕರ ಕೊಲೆ!

Views: 78

ಕನ್ನಡ ಕರಾವಳಿ ಸುದ್ದಿ: ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನಲ್ಲಿ ಮಗಳ ಅಂತರ್ಜಾತಿ ಪ್ರೇಮ ವಿವಾಹಕ್ಕೆ ನೆರವಾಗಿದ್ದಕ್ಕೆ ಜ್ಯೋತಿಷಿಯೊಬ್ಬರನ್ನು ತಂದೆಯೇ ಸಂಚು ರೂಪಿಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಮದುವೆಯ ಜಾತಕ ಪರಿಶೀಲನೆ ಹಾಗೂ ಮಧ್ಯಸ್ಥಿಕೆಯ ನೆಪದಲ್ಲಿ ಜ್ಯೋತಿಷಿಯನ್ನು ನಂಬಿಸಿ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ಈ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಬೆಳಗಾವಿಯ ಮಾನಕಾಪುರ ಗ್ರಾಮದ ಬಳಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಸದ್ಯ ಮಹಾರಾಷ್ಟ್ರ ಮೂಲದ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಕೊಲೆಯಾದ ಜ್ಯೋತಿಷಿಯನ್ನು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಇಚಲಕರಂಜಿ ನಿವಾಸಿ ಮಂದಾರ್ ಅಜಿತ್ ರಾಂಡೆ (35) ಎಂದು ಗುರುತಿಸಲಾಗಿದೆ. ಹತ್ಯೆಗೈದ ಕ್ರೂರಿ ತಂದೆಯನ್ನು ಬಾಬಾಸಾಹೇಬ್ ಅಲಿಯಾಸ್ ದೀಪಕ್ ಮಗ್ಗುಮ್ ಎಂದು ಗುರುತಿಸಿ ಬಂಧಿಸಲಾಗಿದೆ.

ಆರೋಪಿ ದೀಪಕ್ ಮಗ್ಗುಮ್‌ನ 19 ವರ್ಷದ ಮಗಳು ಅನುಜಾ, ಮಹಾರಾಷ್ಟ್ರದ ಶಿವನಾಯಕವಾಡಿ ಗ್ರಾಮದ ಓಂಕಾರ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ ಇವರ ಪ್ರೀತಿಗೆ ತಂದೆಯ ವಿರೋಧವಿತ್ತು. ಈ ವೇಳೆ ಪ್ರೇಮಿಗಳ ಅಂತರ್ಜಾತಿ ವಿವಾಹಕ್ಕೆ ಜ್ಯೋತಿಷಿ ಮಂದಾರ್ ರಾಂಡೆ ಅವರು ಮಧ್ಯಸ್ಥಿಕೆ ವಹಿಸಿ, ಕಳೆದ ಜನವರಿ 13 ರಂದು ಮದುವೆ ಮಾಡಿಸಿದ್ದರು. ಮಗಳು ತನ್ನಿಷ್ಟದಂತೆ ಮದುವೆಯಾಗಲು ನೆರವಾದ ಜ್ಯೋತಿಷಿಯ ಮೇಲೆ ತಂದೆ ತೀವ್ರ ಆಕ್ರೋಶಗೊಂಡು, ಹತ್ಯೆ ಮಾಡಲು ಹೊಂಚು ಹಾಕುತ್ತಿದ್ದ.ಜ್ಯೋತಿಷಿಯನ್ನು ಮುಗಿಸಲು ಮಾಸ್ಟರ್ ಪ್ಲಾನ್ ಮಾಡಿದ್ದ ಆರೋಪಿ, ಅಕ್ಟೋಬರ್ 31 ರಂದು ಬೇರೆ ಮೊಬೈಲ್ ಸಂಖ್ಯೆಯಿಂದ ಮಂದಾರ್ ಅವರಿಗೆ ಕರೆ ಮಾಡಿದ್ದ.

“ಮತ್ತೊಂದು ಮದುವೆ ಮಾಡಿಸಲು ನಿಮ್ಮ ಮಧ್ಯಸ್ಥಿಕೆ ಬೇಕಿದೆ” ಎಂದು ಸುಳ್ಳು ಹೇಳಿ ನಂಬಿಸಿದ್ದ. ಇದನ್ನು ನಿಜವೆಂದು ನಂಬಿ ಮಹಾರಾಷ್ಟ್ರದಿಂದ ಬೆಳಗಾವಿಯ ಮಾನಕಾಪುರಕ್ಕೆ ಬಂದ ಜ್ಯೋತಿಷಿ ಮಂದಾ‌ರ್ ಅವರ ಕಣ್ಣಿಗೆ ಆರೋಪಿ ಏಕಾಏಕಿ ಖಾರದ ಪುಡಿ ಎರಚಿದ್ದಾನೆ. ಕಣ್ಣು ಕಾಣದ ಸಿಕ್ಕ ಸಿಕ್ಕ ಕಡೆ ಓಡುತ್ತಿದ್ದ ಜ್ಯೋತಿಷಿಯ ಮೇಲೆ ಕುಡುಗೋಲಿನಿಂದ ಭೀಕರವಾಗಿ ಹಲ್ಲೆ ನಡೆಸಿ ಕಬ್ಬಿನ ಗದ್ದೆಯಲ್ಲಿ ಹೆಣವಾಗಿಸಿದ್ದಾನೆ.

ಮಾನಕಾಪುರ ಗ್ರಾಮದ ಸಮೀಪ ಕಬ್ಬಿನ ಗದ್ದೆಯಲ್ಲಿ ಜ್ಯೋತಿಷಿಯ ಶವ ಪತ್ತೆಯಾದ ನಂತರ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಮೃತರ ಮೊಬೈಲ್ ಕರೆಗಳ ವಿವರಗಳನ್ನು ಪರಿಶೀಲಿಸಿದಾಗ, ಅಕ್ಟೋಬರ್ 31 ರಂದು ಬಂದಿದ್ದ ಕೊನೆಯ ಅಪರಿಚಿತ ಕರೆಯ ಜಾಡು ಹಿಡಿದು ಹೋದ ವಿಶೇಷ ಪೊಲೀಸ್ ತಂಡವು ಆರೋಪಿ ದೀಪಕ್ ಮಗ್ಗುಮ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕೊಲೆಗೆ ಬಳಸಿದ್ದ ಕುಡುಗೋಲನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.

Related Articles

Back to top button
error: Content is protected !!