ಇತರೆ

ಗಂಡನನ್ನೇ ಕೊಂದು ಹಾರ್ಟ್ ಅಟ್ಯಾಕ್ ಕಥೆ ಕಟ್ಟಿದ ಪತ್ನಿ, ಆಕೆಯ ಪ್ರಿಯಕರ ಅರೆಸ್ಟ್ 

Views: 49

ಕನ್ನಡ ಕರಾವಳಿ ಸುದ್ದಿ: ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿ, ಬಳಿಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಬಿಂಬಿಸಲು ಯತ್ನಿಸಿದ ಆರೋಪದ ಮೇಲೆ 36 ವರ್ಷದ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿರುವುದಾಗಿ ಸೋಮವಾರ ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ಮೃತನ ಪತ್ನಿ ಅನಿತಾ ಮತ್ತು ಆಕೆಯ ಸ್ನೇಹಿತ ಮಧುಸೂದನ್ ಎಂದು ಗುರುತಿಸಲಾಗಿದೆ.

ಇವರಿಬ್ಬರೂ ಆಂಧ್ರಪ್ರದೇಶದ ಒಂದೇ ಗ್ರಾಮದವರಾಗಿದ್ದು, ಪರಸ್ಪರ ಪರಿಚಯವಿದ್ದವರು ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ಟೋಬರ್ 12ರಂದು ಬೆಳಗ್ಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡತೋಗೂರಿನ ಮನೆಯಲ್ಲಿ 41 ವರ್ಷದ ಉಪೇಂದ್ರ ಅವರನ್ನು ಹತ್ಯೆ ಮಾಡಲಾಗಿದೆ. ಬಳಿಕ ಪತ್ನಿ ಅನಿತಾ ಪತಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಕುಟುಂಬದವರಿಗೆ ನಂಬಿಸಿದ್ದಳು.

ಈ ಹಿನ್ನೆಲೆಯಲ್ಲಿ ಆರಂಭದಲ್ಲಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಇತ್ತೀಚೆಗೆ ಬಂದ ಉಪೇಂದ್ರ ಅವರ ಮರಣೋತ್ತರ ಪರೀಕ್ಷೆ ವರದಿ ಇಡೀ ಕೇಸ್‌ಗೆ ದೊಡ್ಡ ಟ್ವಿಸ್ಟ್ ನೀಡಿದೆ.

ಉಪೇಂದ್ರ ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖವಾಗಿದ್ದರಿಂದ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದರು. ಪೊಲೀಸರು ತನಿಖೆ ನಡೆಸಿದಾಗ ಘಟನೆ ನಡೆದ ದಿನ ಉಪೇಂದ್ರ ಮನೆಗೆ ಒಬ್ಬ ಅಪರಿಚಿತ ವ್ಯಕ್ತಿ ಬಂದು ಹೋಗಿದ್ದ ಸುಳಿವು ಸಿಕ್ಕಿದೆ. ಇದರ ಆಧಾರದ ಮೇಲೆ ಮಧುಸೂದನ್ ಎಂಬಾತನನ್ನು ವಶಕ್ಕೆ ಪಡೆದು, ಪತ್ನಿ ಅನಿತಾಳ ಜೊತೆ ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬಯಲಾಗಿದೆ.

ಉಪೇಂದ್ರ ಮತ್ತು ಅನಿತಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೂ ಅನಿತಾ ಮತ್ತೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ನವೆಂಬರ್ 5 ರಂದು ನಡೆದ ವಿಚಾರಣೆಯ ವೇಳೆ, ತಾನು ಉಪೇಂದ್ರ ಅವರ ಪತ್ನಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಾಗಿ ಮಧುಸೂದನ್ ಒಪ್ಪಿಕೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಮ್ಮ ಸಂಬಂಧದ ಬಗ್ಗೆ ಉಪೇಂದ್ರ ಅವರಿಗೆ ಗೊತ್ತಾಗಿತ್ತು ಮತ್ತು ನಮಗೆ ಇಬ್ಬರಿಗೂ ಎಚ್ಚರಿಕೆ ನೀಡಿದ್ದರು ಎಂದು ಮಧುಸೂದನ್ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ.

ಉಪೇಂದ್ರ ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದರಿಂದ, ಆತನನ್ನು ಕತ್ತು ಹಿಸುಕಿ ಹಾಗೂ ಉಸಿರುಗಟ್ಟುವಂತೆ ಮೂಗು ಮತ್ತು ಬಾಯಿ ಮುಚ್ಚಿ ಕೊಲೆ ಮಾಡಲು ಇಬ್ಬರೂ ಸಂಚು ಹೂಡಿದ್ದರು ಎಂದು ಅಧಿಕಾರಿ ಹೇಳಿದ್ದಾರೆ.

ಕೊಲೆಯನ್ನು ಮುಚ್ಚಿಹಾಕಲು, ಉಪೇಂದ್ರ ಬಾತ್ ರೂಮ್ ಗೆ ಹೋಗುವಾಗ ಜಾರಿ ಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಸುಳ್ಳು ಹೇಳುವ ಮೂಲಕ ಅವರು ಇತರರನ್ನು ದಾರಿ ತಪ್ಪಿಸಿದ್ದರು. ಆದರೆ ನವೆಂಬರ್ 6 ರಂದು ದೊಡ್ಡತೋಗೂರಿನಲ್ಲಿರುವ ಆಕೆಯ ಮನೆಯಲ್ಲಿ ಅನಿತಾಳನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ವಿಚಾರಣೆಯ ವೇಳೆ, ಆಕೆ ಈ ಅಪರಾಧದಲ್ಲಿ ತನ್ನ ಪಾತ್ರವಿರುವುದನ್ನು ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ನವೆಂಬರ್ 6 ರಂದು ಇಬ್ಬರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಅವರನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

 

 

Related Articles

Back to top button
error: Content is protected !!