ಒಂದೇ ಕುಟುಂಬದ 7 ಮಂದಿಯ ಭೀಕರ ಹತ್ಯೆ
Views: 53
ಕನ್ನಡ ಕರಾವಳಿ ಸುದ್ದಿ: ಬೆಂಗಳೂರು ರಾಜಧಾನಿ ಬೆಂಗಳೂರಿನಲ್ಲಿ ಇಡೀ ಕುಟುಂಬವನ್ನೇ ಬೆಚ್ಚಿಬೀಳಿಸುವಂತಹ ಸಾಮೂಹಿಕ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
ಪತ್ನಿ ಹಾಗೂ ಆಕೆಯ ಕುಟುಂಬದ ಆರು ಮಂದಿ ಸೇರಿದಂತೆ ಒಟ್ಟು ಏಳು ಜನರನ್ನು ಕೊಂದಿರುವ ಆರೋಪದ ಮೇಲೆ ಕ್ಯಾಬ್ ಚಾಲಕ ಇಂದುಶೇಖರ್‌ನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ಕೃತ್ಯ ನಡೆದಿರುವುದು ಎರಡು ದಿನಗಳ ಹಿಂದೆಯೇ ಎನ್ನಲಾಗಿದ್ದು, ನಾಪತ್ತೆ ಪ್ರಕರಣದ ತನಿಖೆ ವೇಳೆ ಭೀಕರ ಘಟನೆ ಹೊರಬಂದಿದೆ.
ಶ್ರೀರಾಮಪುರದ ರೂಪವತಿ, ಅವರ ಮಗಳು ಸುನೀತಾ, ಪುತ್ರರಾದ ಶಿವಕುಮಾರ್ ಮತ್ತು ಶಂಕರ್, ಸೊಸೆಯಂದಿರಾದ ದಿವ್ಯಾ ಹಾಗೂ ನಳಿನಿ ಮತ್ತು ಏಳು ವರ್ಷದ ಬಾಲಕ ಪುನೀತ್ ಈ ಪ್ರಕರಣದಲ್ಲಿ ಮೃತಪಟ್ಟವರು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಬಾಲಕನ ಮೃತದೇಹ ಮಾತ್ರ ಪತ್ತೆಯಾಗಿದ್ದು, ಉಳಿದವರ ಮೃತದೇಹಗಳಿಗಾಗಿ ಶೋಧ ಮುಂದುವರಿದಿದೆ.
ಸುಮಾರು ಎರಡು ದಶಕಗಳ ಹಿಂದೆ ಸುನೀತಾಳನ್ನು ಮದುವೆಯಾಗಿದ್ದ ಇಂದುಶೇಖರ್, ಪತ್ನಿ ತನ್ನ ತವರು ಮನೆಯವರೊಂದಿಗೆ ನಿಕಟ ಸಂಪರ್ಕ ಹೊಂದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಸುನೀತಾಳ ತಾಯಿ ಮತ್ತು ಸಹೋದರರು ಆಕೆಯ ಬೆಂಬಲಕ್ಕೆ ನಿಲ್ಲುತ್ತಿದ್ದದ್ದು ಕೂಡ ಆರೋಪಿಯ ಅಸಮಾಧಾನಕ್ಕೆ ಕಾರಣವಾಗಿತ್ತು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಪೊಲೀಸರ ಪ್ರಕಾರ, ಮೊದಲು ತನ್ನ ಮನೆಯಲ್ಲೇ ಪತ್ನಿಯ ಮೇಲೆ ರುಬ್ಬುಗುಂಡಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಆಕೆ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಿದ್ದಾಳೆ ಎಂದು ಕುಟುಂಬದವರಿಗೆ ಸುಳ್ಳು ಮಾಹಿತಿ ನೀಡಿದ್ದಾನೆ. ನಂತರ ಸುನೀತಾಳ ಸಹೋದರರಾದ ಶಿವಕುಮಾರ್ ಮತ್ತು ಶಂಕರ್ ಅವರನ್ನು ಮನೆಗೆ ಕರೆಸಿಕೊಂಡು ಹತ್ಯೆ ಮಾಡಿರುವ ಆರೋಪವಿದೆ.
ಇದಾದ ಬಳಿಕ ಅವರ ಪತ್ನಿಯರಾದ ನಳಿನಿ, ದಿವ್ಯಾ, ಅತ್ತೆ ರೂಪವತಿ ಹಾಗೂ ಬಾಲಕ ಪುನೀತ್‌ನನ್ನೂ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.






