ಇತರೆ

ಕುಂದಾಪುರ:ಬಳ್ಕೂರಿನಲ್ಲಿ ಎರಡು ಟಿಪ್ಪರ್‌ಗಳ ನಡುವೆ ಅಪಘಾತ, ಇಬ್ಬರು ವಿದ್ಯಾರ್ಥಿಗಳು ಗಂಭೀರ, ಮೂವರ ಬಂಧನ

Views: 109

ಕನ್ನಡ ಕರಾವಳಿ ಸುದ್ದಿ:ಕೊಜೆ ಮಣ್ಣು ಸಾಗಾಟ ಮಾಡುತ್ತಿದ್ದ ಎರಡು ಟಿಪ್ಪರ್‌ಗಳ ನಡುವೆ ಸಂಭವಿಸಿದ ಅಪಘಾತದಿಂದ ನಿಯಂತ್ರಣ ತಪ್ಪಿದ ಟಿಪ್ಪ‌ರ್ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾಲೇಜಿಗೆ ತೆರಳುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ಬೆಳಿಗ್ಗೆ ಬಳ್ಳೂರು ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನದ ಬಳಿ ಸಂಭವಿಸಿದೆ.

ವಿದ್ಯಾರ್ಥಿಗಳಾದ ಟಿ.ಕೆ. ಮೊಹಮ್ಮದ್ ಶಯಾನ್ ಹಾಗೂ ಮೊಹಮ್ಮದ್ ರಯಾನ್ ಗಾಯಗೊಂಡವರು. ಇವರು ಕಂಡ್ಲೂರು ಕಡೆಯಿಂದ ಬಸ್ರೂರು ಕಡೆಗೆ ಸ್ಕೂಟರ್‌ನಲ್ಲಿ ಕಾಲೇಜಿಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಂದಾಪುರ ಕಡೆಯಿಂದ ಎರಡು ಟಿಪ್ಪರ್‌ಗಳು ಅಡ್ಡಾದಿಡ್ಡಿಯಾಗಿ ಸಂಚರಿಸುತ್ತಿದ್ದವು ಎನ್ನಲಾಗಿದೆ. ಮುಂದೆ ಸಾಗುತ್ತಿದ್ದ ಕೆಎಸ್ಸಾರ್ಟಿಸಿ ಬಸ್‌ ಗಮನಿಸಿ, ಮೊದಲ ಟಿಪ್ಪರ್ ಚಾಲಕ ವೇಗ ಕಡಿಮೆ ಮಾಡಿದ್ದಾನೆ. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಮತ್ತೊಂದು ಟಿಪ್ಪರ್ ಮುಂದಿನ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ನಿಯಂತ್ರಣ ತಪ್ಪಿ ರಸ್ತೆಯ ಬಲಭಾಗಕ್ಕೆ ಚಲಿಸಿ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ.

ಅಪಘಾತಕ್ಕೆ ಕಾರಣವಾದ ಟಿಪ್ಪರ್‌ಗಳಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಕೊಜೆ ಮಣ್ಣನ್ನು ತುಂಬಿಕೊಂಡು ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಈ ಸಂಬಂಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಟಿಪ್ಪರ್ ಚಾಲಕರಾದ ನಾಗರಾಜ, ರಜ್ ಹಾಗೂ ಕೊಜೆ ಮಣ್ಣು ತೆಗೆದ ಸ್ಥಳದ ಮಾಲೀಕ ಅಜಿತ್‌ ಶೆಟ್ಟಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

Related Articles

Back to top button
error: Content is protected !!