ಯುವಜನ

ಆಟವಾಡುತ್ತಿದ್ದ ವೇಳೆ ಕುತ್ತಿಗೆಗೆ ಹಗ್ಗ ಸಿಲುಕಿ ಬಾಲಕ ಸಾವು 

Views: 12

ಕನ್ನಡ ಕರಾವಳಿ ಸುದ್ದಿ: ಬಂಟ್ವಾಳ ತಾಲ್ಲೂಕಿನ ಕುಕ್ಕಿಪಾಡಿ ಗ್ರಾಮದ ಕೆಂತಲೆ ಎಂಬಲ್ಲಿ ಮನೆಯಲ್ಲಿ ಆಟವಾಡುತ್ತಿದ್ದ ಬಾಲಕನೊಬ್ಬ ಕುತ್ತಿಗೆಗೆ ಹಗ್ಗ ಸಿಲುಕಿ ಆಕಸ್ಮಿಕವಾಗಿ ಮೃತಪಟ್ಟಿದ್ದಾನೆ.

ಕುಕ್ಕಿಪಾಡಿಯ ಹೋಟೆಲ್ ಕಾರ್ಮಿಕ ಆನಂದ ಪೂಜಾರಿ ಅವರ ಮಗ ಅಮೃತ್‌ ಎ.ಪೂಜಾರಿ (9) ಮೃತ ಬಾಲಕ.

ಆತ ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಮನೆಯೊಳಗೆ ಕಿಟಕಿ ಬಳಿ ಒಬ್ಬನೇ ಆಟವಾಡುತ್ತಿದ್ದ. ಆತನ ತಾಯಿ ಮತ್ತು ಸಹೋದರಿ ಅಡುಗೆ ಮನೆಯಲ್ಲಿದ್ದರು. ಈ ವೇಳೆ ಕಿಟಕಿಗೆ ಕಟ್ಟಿದ್ದ ಸ್ಕಿಪ್ಪಿಂಗ್ ಆಟದ ಹಗ್ಗ ಈತನ ಕುತ್ತಿಗೆಗೆ ಬಿಗಿದುಕೊಂಡಿತ್ತು. ಅದನ್ನು ನೋಡಿದ ಆತನ ತಾಯಿ ಕಿರುಚಿಕೊಂಡಿದ್ದರು. ಪಕ್ಕದ ಮನೆಯಲ್ಲಿದ್ದ ಆನಂದ ಪೂಜಾರಿಯವರ ತಮ್ಮ ಜಯಾನಂದ ಮತ್ತಿತರರು ಬಂದು ಬಾಲಕನನ್ನು ಮೂಡುಬಿದಿರೆಯ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಷ್ಟರಲ್ಲೇ ಬಾಲಕ ಕೊನೆಯುಸಿರೆಳೆದಿದ್ದ ಎಂದು ಅಲ್ಲಿನ ವೈದ್ಯರು ತಿಳಿಸಿದ್ದರು.

ಈ ಬಗ್ಗೆ ಜಯಾನಂದ ಅವರು ಪುಂಜಾಲಕಟ್ಟೆ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಅಮೃತ್‌ ಬಂಟ್ವಾಳದ ಎಸ್‌ವಿಎಸ್ ಇಂಗ್ಲಿಷ್‌ ಮಾಧ್ಯಮ ಶಾಲೆಯ 3 ನೇ ತರಗತಿ ವಿದ್ಯಾರ್ಥಿ.

Related Articles

Back to top button
error: Content is protected !!