ಜನಮನ

ಬಂಗಾಳಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತ:3 ದಿನಗಳ ಕಾಲ ಭಾರಿ ಮಳೆ ಸಾಧ್ಯತೆ

Views: 18

ಕನ್ನಡ ಕರಾವಳಿ ಸುದ್ದಿ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ತೀವ್ರ ವಾಯುಭಾರ ಕುಸಿತವು ಶೀಘ್ರದಲ್ಲೇ ಚಂಡಮಾರುತವಾಗಿ ರೂಪಾಂತರಗೊಳ್ಳಲಿದ್ದು, ಅ.28ರಂದು ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ)  ಎಚ್ಚರಿಸಿದೆ. ಇದರ ಪರಿಣಾಮವಾಗಿ ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಸೇರಿದಂತೆ ದಕ್ಷಿಣ ಮತ್ತು ಪೂರ್ವ ಭಾರತದ ಹಲವು ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ.

ಪ್ರಸ್ತುತ ಪೂರ್ವ-ಮಧ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದು ಸೋಮವಾರ ಬೆಳಿಗ್ಗೆ ಹೊತ್ತಿಗೆ ತೀವ್ರಗೊಂಡು ಚಂಡಮಾರುತವಾಗಿ ಬದಲಾಗಲಿದೆ. ಅ.27ಕ್ಕೆ ಮತ್ತಷ್ಟು ತೀವ್ರಗೊಂಡು, ಅ.28ಕ್ಕೆ ಭೀಕರ ಚಂಡಮಾರುತವಾಗಿ ಮಾರ್ಪಟ್ಟು ಆಂಧ್ರದ ವಿಶಾಖಪಟ್ಟಣ ಹಾಗೂ ಬಾಪಟ್ಲ ನಡುವಿನ ಕರಾವಳಿಗೆ ಅಪ್ಪಳಿಸಲಿದೆ.

ಈ ಚಂಡಮಾರುತವು ಅ.28ರ ಮಧ್ಯಾಹ್ನದ ಹೊತ್ತಿಗೆ ಆಂಧ್ರಪ್ರದೇಶದ ಬಾಪಟ್ಲಾ ಮತ್ತು ವಿಶಾಖಪಟ್ಟಣಂ ಮಧ್ಯೆ ಹಾಗೂ ಯಾನಂ ಕರಾವಳಿಯ ಭಾಗದಲ್ಲಿ ಅಪ್ಪಳಿಸಲಿದೆ. ಆಂಧ್ರ ಹಾಗೂ ದಕ್ಷಿಣ ಒಡಿಶಾ ಕರಾವಳಿ ಪ್ರದೇಶಗಳಿಗೆ ಈಗಾಗಲೇ ಎಚ್ಚರಿಕೆಯನ್ನು ನೀಡಲಾಗಿದೆ. ಚಂಡಮಾರುತವು ವಾಯುವ್ಯ ದಿಕ್ಕಿನಲ್ಲಿ ಚಲಿಸುವುದರಿಂದ ಪಶ್ಚಿಮ ಬಂಗಾಳದ ಮೇಲೂ ತೀವ್ರ ಪರಿಣಾಮ ಬೀರಲಿದೆ. ಅ.27ರಿಂದಲೇ ಬಂಗಾಳ ಕರಾವಳಿಯಲ್ಲಿ ಬಿರುಗಾಳಿ ಬೀಸಲಿದ್ದು, ಅ.28-30ರವರೆಗೆ ಭಾರಿ ಮಳೆಯಾಗಲಿದೆ.

ಚಂಡಮಾರುತದ ಎಫೆಕ್ಟ್‌ನಿಂದಾಗಿ ರಾಜ್ಯದ ಕರಾವಳಿ, ಮಲೆನಾಡು ಹಾಗೂ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ.

Related Articles

Back to top button
error: Content is protected !!