ಇತರೆ

ಕುಂದಾಪುರ: ಶಾನಾಡಿಯಲ್ಲಿ ದಾರುಣ ಘಟನೆ, ವಿಶೇಷ ಚೇತನ ಮಗಳನ್ನು ಕೊಂದು ತಾಯಿ ಆತ್ಮಹತ್ಯೆ

Views: 136

ಕನ್ನಡ ಕರಾವಳಿ ಸುದ್ದಿ: ವಿಶೇಷ ಚೇತನ ಮಗಳನ್ನು ಕತ್ತಿಯಿಂದ ಕತ್ತು ಕೊಯ್ದು ಕೊಲೆ ಮಾಡಿದ ಬಳಿಕ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಕುಂದಾಪುರ ತಾಲೂಕಿನ ಕೆದೂರು- ಶಾನಾಡಿ ಕೊರಗ ಕಾಲೋನಿಯಲ್ಲಿ ಅ.25ರಂದು ಭಾನುವಾರ ಬೆಳಗ್ಗೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ನೇತ್ರಾವತಿ

ಮೃತರನ್ನು ಶಾನಾಡಿ ಕೊರಗ ಕಾಲೋನಿ ನಿವಾಸಿ ಸುಧಾಕರ ಕೊರಗ ಅವರ ಪುತ್ರಿ ಸುಪ್ರತಿ (14) ಹಾಗೂ ಪತ್ನಿ ನೇತ್ರಾವತಿ (34) ಎಂದು ಗುರುತಿಸಲಾಗಿದೆ. ಸುಪ್ರತಿ ಹುಟ್ಟಿನಿಂದಲೇ ವಿಶೇಷ ಚೇತನಳಾಗಿದ್ದು, ಆಕೆಯ ಆರೈಕೆಯನ್ನು ತಾಯಿ ನೇತ್ರಾವತಿ ಮಾಡುತ್ತಿದ್ದರು.

ಸುಧಾಕರ ಅವರು ಕೂಲಿ ಕೆಲಸ ಮಾಡಿಕೊಂಡು ಕುಟುಂಬವನ್ನು ನಿರ್ವಹಿಸುತ್ತಿದ್ದರು. ಸುಪ್ರತಿಗೆ ನಡೆಯಲು, ಕುಳಿತುಕೊಳ್ಳಲು ಹಾಗೂ ಮಾತನಾಡಲು ಸಾಧ್ಯವಾಗದೆ ಹಾಸಿಗೆಯಲ್ಲೇ ಇರಬೇಕಾದ ಸ್ಥಿತಿಯಲ್ಲಿದ್ದಳು. ದಂಪತಿಗೆ ಒಂದು ವರ್ಷದ ಗಂಡು ಮಗುವೂ ಇದೆ.

ಭಾನುವಾರ ಬೆಳಗ್ಗೆ ಸುಧಾಕರ ಅವರು ಕೆಲಸಕ್ಕೆ ತೆರಳಿದ ಬಳಿಕ ನೇತ್ರಾವತಿ ಮನೆಯ ಕೆಲಸಗಳನ್ನು ಮುಗಿಸಿ, ಮಗಳ ಕುತ್ತಿಗೆಯನ್ನು ಕತ್ತಿಯಿಂದ ಕೊಯ್ದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಬಳಿಕ ತಾವೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬ೦ದಿದೆ.

ಘಟನೆಗೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ.

ಘಟನಾ ಸ್ಥಳಕ್ಕೆ ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಎಚ್‌.ಡಿ. ಕುಲಕರ್ಣಿ, ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೋಟ ಪೊಲೀಸ್‌ ಠಾಣೆಯ ಉಪನಿರೀಕ್ಷಕ ಪ್ರವೀಣ್ ಕುಮಾರ್ ಆರ್. ಹಾಗೂ ಸೋಕೋ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

Related Articles

Back to top button
error: Content is protected !!