ವಿದ್ಯುತ್ ಸ್ಪರ್ಶಿಸಿ ಇಬ್ಬರು ದೈವನರ್ತಕರ ದಾರುಣ ಸಾವು
Views: 46
ಕನ್ನಡ ಕರಾವಳಿ ಸುದ್ದಿ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಬೊಮ್ಮೆಟ್ಟಿಯಲ್ಲಿ ಅಕ್ಟೋಬರ್ 12ರ ತಡರಾತ್ರಿ ಹಳ್ಳದಲ್ಲಿ ಮೀನು ಹಿಡಿಯುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಇಬ್ಬರು ಯುವಕರು ದಾರುಣವಾಗಿ ಮೃತಪಟ್ಟಿದ್ದಾರೆ.
ಮೃತರನ್ನು ಕಲ್ಮಡ್ಕದ ಭರತ್ (28) ಮತ್ತು ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಅವರ ಭಾವ ರಮೇಶ್ ಅಲಿಯಾಸ್ ಗಣೇಶ್ (36) ಎಂದು ಗುರುತಿಸಲಾಗಿದೆ.
ಇವರಿಬ್ಬರು ಮತ್ತೊಬ್ಬ ಅಪ್ರಾಪ್ತ ಬಾಲಕನೊಂದಿಗೆ ಹೊಲ್ಲೇಕೆರೆ ಎಂಬ ಹಳ್ಳದಲ್ಲಿ ಮೀನು ಹಿಡಿಯಲು ನೀರಿನಲ್ಲಿ ಚಲಿಸುತ್ತಿದ್ದಾಗ, ಸಮೀಪದ ಮಧುಸೂಧನ್ ಭಟ್ ಎಂಬುವವರ ತೋಟದಿಂದ ಹಳ್ಳದ ನೀರಿಗೆ ವಿದ್ಯುತ್ ಪ್ರವಹಿಸಿ ಈ ದುರಂತ ಸಂಭವಿಸಿದೆ.
ಇವರೊಂದಿಗಿದ್ದ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾನೆ. ಆತನೇ ತಕ್ಷಣ ಓಡಿಹೋಗಿ ಮನೆಯವರಿಗೆ ಮಾಹಿತಿ ನೀಡಿದ್ದನು.
ಇಬ್ಬರೂ ದೈವನರ್ತಕರು
ಮೃತ ಭರತ್ ಮತ್ತು ರಮೇಶ್ ಇಬ್ಬರೂ ದೈವನರ್ತಕರಾಗಿ ಗುರುತಿಸಿಕೊಂಡಿದ್ದರು. ಭರತ್ ಉತ್ತಮ ಕ್ರೀಡಾಪಟುವಾಗಿಯೂ ಹೆಸರು ಗಳಿಸಿದ್ದರು. ಕುಟುಂಬದ ಆಪ್ತ ಸಂಬಂಧಿಗಳಾಗಿದ್ದ ಇಬ್ಬರೂ ಒಂದೇ ಘಟನೆಯಲ್ಲಿ ಮೃತಪಟ್ಟಿರುವುದು ಎರಡೂ ಕುಟುಂಬಗಳಲ್ಲಿ ತೀವ್ರ ಶೋಕಕ್ಕೆ ಕಾರಣವಾಗಿದೆ.
ತೋಟಕ್ಕೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಆರೋಪದ ಮೇಲೆ ತೋಟದ ಮಾಲೀಕ ಮಧುಸೂಧನ್ ಭಟ್ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 105 ಹಾಗೂ ವಿದ್ಯುತ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.






