ಸಾರ್ವಜನಿಕರಿಂದ ಚಿನ್ನಾಭರಣ, ಕೋಟ್ಯಾಂತರ ರೂಪಾಯಿ ವಂಚಿಸುತ್ತಿದ್ದ ನಕಲಿ ಲೇಡಿ PSI ಬಂಧನ
Views: 67
ಕನ್ನಡ ಕರಾವಳಿ ಸುದ್ದಿ: ತಾನು ಬೆಂಗಳೂರಿನ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (PSI) ಎಂದು ಸುಳ್ಳು ಹೇಳಿ, ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿ ಹಣ, ಚಿನ್ನ ಹಾಗೂ ಐಷಾರಾಮಿ ಕಾರುಗಳನ್ನು ಪಡೆದು ಭಾರಿ ವಂಚನೆ ಎಸಗುತ್ತಿದ್ದ ನಕಲಿ ಲೇಡಿ ಪಿಎಸ್‌ಐ ಪ್ರಮುಖ ಆರೋಪಿಯನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ.
ರಾಮನಗರ ಮೂಲದ ನಿವೇದಿತಾ ಗೌಡ ಬಂಧಿತ ಆರೋಪಿಯಾಗಿದ್ದು, ಈಕೆಯಿಂದ ವಂಚನೆಗೊಳಗಾದ 25ಕ್ಕೂ ಹೆಚ್ಚು ಸಂತ್ರಸ್ತರು ದೂರು ನೀಡಿದ ಹಿನ್ನೆಲೆಯಲ್ಲಿ ಬಸವನಹಳ್ಳಿ ಹಾಗೂ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ನಗದು ಹಾಗೂ ಕೆಜಿಗಟ್ಟಲೆ ಚಿನ್ನಾಭರಣಗಳನ್ನು ಪಡೆದು ವಂಚಿಸಿದ್ದಾಳೆ. ಅಷ್ಟೇ ಅಲ್ಲದೆ, ಪರಿಚಯಸ್ಥರಿಂದ ಓಡಾಟದ ನೆಪದಲ್ಲಿ ಐಷಾರಾಮಿ ಕಾರುಗಳನ್ನು ಪಡೆದುಕೊಂಡು, ಅವುಗಳನ್ನು ಇತರರಿಗೆ ಅಕ್ರಮವಾಗಿ ಮಾರಾಟ ಮಾಡಿ ಹಣ ಮಾಡಿಕೊಳ್ಳುತ್ತಿದ್ದ ಕೃತ್ಯ ಬೆಳಕಿಗೆ ಬಂದಿದೆ. ಆರೋಪಿಯ ಮೊಬೈಲ್ ಫೋನ್ ಪರಿಶೀಲಿಸಿದ ವೇಳೆ ಬೇರೆ ಬೇರೆ ಹೆಸರುಗಳಲ್ಲಿದ್ದ ಹಲವು ನಕಲಿ ಆಧಾರ್ ಕಾರ್ಡ್‌ಗಳು ಪತ್ತೆಯಾಗಿವೆ. ಚಿಕ್ಕಮಗಳೂರು ಮಾತ್ರವಲ್ಲದೆ ರಾಜ್ಯದ ಹಲವು ಜಿಲ್ಲೆಗಳಲ್ಲಿಯೂ ಈಕೆ ಇದೇ ರೀತಿ ವಂಚನೆ ಎಸಗಿರುವುದು ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಿದೆ.
ಆರೋಪಿ ನಿವೇದಿತಾ ಗೌಡ ಮೂಲತಃ ರಾಮನಗರದವಳಾಗಿದ್ದು, ಕಳೆದ ಒಂದು ವರ್ಷದಿಂದ ಚಿಕ್ಕಮಗಳೂರಿನ ಪ್ರಮುಖ ವಾಣಿಜ್ಯ ಪ್ರದೇಶವಾದ ಐ.ಜಿ. ರಸ್ತೆಯಲ್ಲಿ ಕೆಫೆಯೊಂದನ್ನು ನಡೆಸುತ್ತಿದ್ದಳು. ಸಾರ್ವಜನಿಕರಿಗೆ ಅನುಮಾನ ಬಾರದಂತೆ ತಾನು ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣೆಯ ಪಿಎಸ್‌ಐ ಎಂದು ಪರಿಚಯಿಸಿಕೊಳ್ಳುತ್ತಿದ್ದಳು. ಜನರು ನಂಬಲಿ ಎನ್ನುವ ಕಾರಣಕ್ಕೆ ಪೊಲೀಸರ ರೀತಿಯೇ ಶಾರ್ಟ್ ಕಟಿಂಗ್ ಮಾಡಿಸಿಕೊಂಡು, ಖಾಕಿ ಯೂನಿಫಾರ್ಮ್ ಮಾದರಿಯ ಉಡುಪು ಧರಿಸುತ್ತಿದ್ದಳು. ಕೆಫೆಗೆ ಬರುವ ಗ್ರಾಹಕರು, ಮಹಿಳೆಯರು ಹಾಗೂ ಯುವಕರನ್ನೇ ಪ್ರಮುಖ ಟಾರ್ಗೆಟ್ ಮಾಡುತ್ತಿದ್ದ ಈಕೆ, “ತಾನು ಪ್ರಸ್ತುತ ಕರ್ತವ್ಯಕ್ಕೆ ರಜೆ ಹಾಕಿ ಚಿಕ್ಕಮಗಳೂರಿಗೆ ಬಂದಿದ್ದೇನೆ” ಎಂದು ಕಥೆ ಕಟ್ಟಿ ನಂಬಿಸುತ್ತಿದ್ದಳು. ಹಲವು ಜಿಲ್ಲೆಗಳಲ್ಲಿಯೂ ಈಕೆ ಇದೇ ರೀತಿ ವಂಚನೆ ಎಸಗಿರುವುದು ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಿದೆ.
ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಆರೋಪಿ ನಿವೇದಿತಾ ಗೌಡಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ತಾನು ಸಾರ್ವಜನಿಕರಿಗೆ ವಂಚಿಸಿ ಸಂಪಾದಿಸಿದ್ದ ಕೋಟ್ಯಂತರ ರೂಪಾಯಿ ಹಣ ಹಾಗೂ ಬಂಗಾರವನ್ನು ತನ್ನ ಪ್ರಿಯಕರನಿಗೆ ನೀಡಿರುವುದಾಗಿ ಬಾಯಿಬಿಟ್ಟಿದ್ದಾಳೆ. ನಿವೇದಿತಾ ಪ್ರಿಯಕರ ದೇವು ಎಂಬಾತ ಚಿಕ್ಕಮಗಳೂರು ನಗರದ ನಿವಾಸಿಯಾಗಿದ್ದು, ಸದ್ಯ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಆತನ ಬಂಧನಕ್ಕಾಗಿ ಬಲೆ ಬೀಸಿದ್ದು, ತನಿಖೆಯನ್ನು ತೀವ್ರಗೊಳಿಸಿದ್ದಾರೆ.






