ನಾವುಂದ – ಬಡಾಕೆರೆ ಕ್ರಾಸ್‌ನಲ್ಲಿ ಸರಣಿ ಅಪಘಾತ: 7 ಮಂದಿಗೆ ಗಾಯ
Views: 37
ಕನ್ನಡ ಕರಾವಳಿ ಸುದ್ದಿ: ಬೈಂದೂರು – ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ನಾವುಂದ – ಬಡಾಕೆರೆ ಕ್ರಾಸ್‌ನಲ್ಲಿ ಬುಧವಾರ ಕಾರುಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿದ್ದು, 7 ಮಂದಿ ಗಾಯಗೊಂಡ ಘಟನೆ ಸಂಭವಿಸಿದೆ.
ಅರೆಹೊಳೆ ಹೊರದಾರಿಯ ಕಡೆಯಿಂದ ಕುಂದಾಪುರ ಕಡೆಗೆ ಬರುತ್ತಿದ್ದ ಕಾರು ಹಾಗೂ ಕುಂದಾಪುರದಿಂದ ಶಿರೂರು ಕಡೆಗೆ ತೆರಳುತ್ತಿದ್ದ ಮತ್ತೊಂದು ಕಾರು ಸೇರಿದಂತೆ ಮೂರು ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಢಿಕ್ಕಿಯಾದ ರಭಸಕ್ಕೆ ಕಾರುಗಳು ನಜ್ಜುಗುಜ್ಜಾಗಿವೆ.
ಈ ಪ್ರದೇಶದಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ಬಡಾಕೆರೆ ಕಡೆಯಿಂದ ಬರುವ ವಾಹನಗಳು ನೇರವಾಗಿ ರಾಷ್ಟ್ರೀಯ ಹೆದ್ದಾರಿಗೆ ಬಂದು ನಿಲ್ಲುವ ಪರಿಸ್ಥಿತಿ ಇರುವುದರಿಂದ, ಇಲ್ಲಿ ಸೂಕ್ತ ಸಂಪರ್ಕ ರಸ್ತೆ, ತಿರುವು ಹಾಗೂ ಸಂಚಾರ ನಿಯಂತ್ರಣ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಹಿಂದೆಯೂ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಈವರೆಗೆ ಯಾವುದೇ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ನಾವುಂದ – ಬಡಾಕೆರೆ ಕ್ರಾಸ್‌ನಲ್ಲಿ ಕ್ಯಾಮೆರಾಗಳನ್ನು ಅಳವಡಿಸಿ, ವಾಹನಗಳ ಸಂಚಾರದ ಮೇಲೆ ನಿಗಾ ವಹಿಸಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಘಟನಾ ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.






