ಯುವಜನ

ಬಾಲ್ಕನಿಯಲ್ಲಿ ಬಟ್ಟೆಗಳನ್ನು ತರಲು ಹೋಗಿ 12ನೇ ಮಹಡಿಯಿಂದ ಬಿದ್ದು, ರಾಷ್ಟ್ರಮಟ್ಟದ ಚಿನ್ನದ ಪದಕ ಗೆದ್ದ ಬಾಲಕಿ ಸಾವು 

Views: 33

ಕನ್ನಡ ಕರಾವಳಿ ಸುದ್ದಿ: ಸಿಬಿಎಸ್‌ಇ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಇತ್ತೀಚೆಗಷ್ಟೇ ಎರಡು ಚಿನ್ನದ ಪದಕಗಳನ್ನು ಗೆದ್ದು ಮನೆಗೆ ಹಿರಿಮೆ ತಂದಿದ್ದ 14 ವರ್ಷದ ಪ್ರತಿಭಾವಂತ ಬಾಲಕಿಯೊಬ್ಬಳು 12ನೇ ಮಹಡಿಯ ಬಾಲ್ಕನಿಯಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ನಡೆದಿದೆ.

ಘಾಜಿಯಾಬಾದ್‌ನ ರಾಜ್‌ನಗರ ಎಕ್ಸ್‌ಟೆನ್ನನ್‌ನಲ್ಲಿರುವ ಬಹುಮಹಡಿ ಅಪಾರ್ಟ್‌ಮೆಂಟ್‌ನಲ್ಲಿ ಶುಕ್ರವಾರ ರಾತ್ರಿ ಈ ದುರಂತ ಸಂಭವಿಸಿದೆ. ಮೃತ ಬಾಲಕಿ ಖಾಸಗಿ ಶಾಲೆಯೊಂದರಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದಳು. ಆಕೆಯ ತಂದೆ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಸಾಫ್ಟ್‌ವೇ‌ರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪೊಲೀಸರ ಮಾಹಿತಿಯ ಪ್ರಕಾರ, ಘಟನೆ ನಡೆದ ಸಮಯದಲ್ಲಿ ಬಾಲಕಿಯ ಪೋಷಕರು, ಕಿರಿಯ ಸಹೋದರಿ ಹಾಗೂ ಮನೆಗೆ ಭೇಟಿ ನೀಡಿದ್ದ ಅಜ್ಜ-ಅಜ್ಜಿ ಮನೆಯಲ್ಲೇ ಇದ್ದರು. ರಾತ್ರಿ ಸುಮಾರು 9 ಗಂಟೆಯ ಸುಮಾರಿಗೆ ಬಾಲ್ಕನಿಯಲ್ಲಿ ಒಣಗಲು ಹಾಕಿದ್ದ ಬಟ್ಟೆಗಳನ್ನು ತರಲು ಬಾಲಕಿ ತೆರಳಿದ್ದಳು. ಆ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ 12ನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾಳೆ ಎಂದು ಶಂಕಿಸಲಾಗಿದೆ. ತಕ್ಷಣವೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಸಿಬಿಎಸ್‌ಇ ಆಯೋಜಿಸಿದ್ದ ರಾಷ್ಟ್ರಮಟ್ಟದ ರೋಪ್ ಸ್ಕಿಪ್ಪಿಂಗ್ (ಹಗ್ಗ ಜಿಗಿತ) ಸ್ಪರ್ಧೆಯಲ್ಲಿ ಈಕೆ 19 ವರ್ಷದೊಳಗಿನವರ ವಿಭಾಗದಲ್ಲಿ ‘ಡಬಲ್ ಡಚ್ ಪೇ‌ರ್ ಫ್ರೀಸ್ಟೈಲ್’ ಹಾಗೂ ‘ಡಬಲ್ ಡಚ್ ಸಿಂಗಲ್ ಫ್ರೀಸ್ಟೈಲ್’ ವಿಭಾಗಗಳಲ್ಲಿ ಎರಡು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಳು.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಕುಟುಂಬಸ್ಥರಿಂದ ಯಾವುದೇ ಸಂಶಯ ಅಥವಾ ದೂರು ದಾಖಲಾಗಿಲ್ಲ ಎಂದು ನಂದಗ್ರಾಮ್ ವೃತ್ತದ ಎಸಿಪಿ ಜಿಯಾವುದ್ದೀನ್ ಅಹ್ಮದ್‌ ತಿಳಿಸಿದ್ದಾರೆ. ಅಪಾರ ಕನಸುಗಳನ್ನಿಟ್ಟುಕೊಂಡಿದ್ದ ಕ್ರೀಡಾಪಟುವಿನ ಅಕಾಲಿಕ ಸಾವು ಕುಟುಂಬ ಮತ್ತು ಸ್ಥಳೀಯರಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.

Related Articles

Back to top button
error: Content is protected !!