ಇತರೆ

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ಕಾರಿಡಾರ್ ರಸ್ತೆಯಲ್ಲಿ ಭೀಕರ ಅಪಘಾತ:ಕಾರು ಪಲ್ಟಿಯಾಗಿ ನಾಲ್ವರು ಸ್ಥಳದಲ್ಲೇ ಸಾವು 

Views: 47

ಕನ್ನಡ ಕರಾವಳಿ ಸುದ್ದಿ : ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ಕಾರಿಡಾರ್ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಬಂಗಾರಪೇಟೆ ತಾಲ್ಲೂಕಿನ ಮರಗಲ್ ಬಳಿ ನಡೆದಿದೆ.

ಕಾರಿನಲ್ಲಿ ಒಟ್ಟು ಐವರು ಪ್ರಯಾಣಿಸುತ್ತಿದ್ದರು. ಕಾರು ಮರಗಲ್ ಸಮೀಪದ ಎಕ್ಸ್‌ಪ್ರೆಸ್ ಕಾರಿಡಾರ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ. ಅಪಘಾತದ ತೀವ್ರತೆಗೆ ಕಾರು ಹಲವು ಬಾರಿ ಪಲ್ಟಿ ಹೊಡೆದು ಸುಮಾರು 200 ಮೀಟರ್‌ಗಳಷ್ಟು ದೂರಕ್ಕೆ ಉರುಳಿದ ಪರಿಣಾಮ ನಾಲ್ಕು ಜನ ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮೃತರನ್ನು ನವನೀತ್ ಗಾಯಾಕ್ವಾಡ್, ಪವಾರ್‌ ವಿಶ್ವನಾಥ್ ದಿಗಂಬರ, ಕಿರಣ್ ಹಾಗೂ ವಿಶಾಲ್ ಎಂದು ಗುರುತಿಸಲಾಗಿದೆ. ಸೋಮನಾಥ್ ಕೊಲ್ಲಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಎಸ್ ಪಿ ಶಿವಂಶು ರಜಪೂತ್, ಡಿವೈಎಸ್ಪಿ ಲಕ್ಷಯ್ಯ ಹಾಗೂ ಪೊಲೀಸ್‌ ಇನ್ಸ್‌ಪೆಕ್ಟ‌ರ್ ರವಿಕುಮಾ‌ರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಾಥಮಿಕ ತನಿಖೆಯ ಪ್ರಕಾರ, ರಸ್ತೆಯ ತಿರುವಿನಲ್ಲಿ ಅತಿವೇಗವಾಗಿ ವಾಹನ ಚಲಾಯಿಸಿರುವುದು ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಅಪಘಾತದ ನಿಖರ ಕಾರಣವನ್ನು ತನಿಖೆಯ ನಂತರವೇ ಖಚಿತಪಡಿಸಬೇಕಾಗಿದೆ.

ಘಟನೆಯ ಕುರಿತು ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.

Related Articles

Back to top button
error: Content is protected !!