ಬೇರೊಬ್ಬನ ಜೊತೆ ಸ್ನೇಹ ಮಾಡಿದ್ದಕ್ಕೆ ಎಂಜಿನಿಯರಿಂಗ್ ವಿದ್ಯಾರ್ಥಿನಿಗೆ ಕೀಟನಾಶಕ ಕುಡಿಸಿ ಕೊಲೆಗೈದ ಉಪನ್ಯಾಸಕ
Views: 54
ಕನ್ನಡ ಕರಾವಳಿ ಸುದ್ದಿ: ಬೇರೊಬ್ಬನ ಜೊತೆ ಸ್ನೇಹ ಮಾಡಿದ್ದಕ್ಕೆ ಕೋಪಗೊಂಡ ಉಪನ್ಯಾಸಕನೊಬ್ಬ ಎಂಜಿನಿಯರಿಂಗ್ ವಿದ್ಯಾರ್ಥಿನಿಗೆ ಬಲವಂತವಾಗಿ ಕೀಟನಾಶಕ ಕುಡಿಸಿ ಕೊಲೆ ಮಾಡಿರುವ ಘೋರ ಘಟನೆ ಬೆಳಕಿಗೆ ಬಂದಿದೆ.
ತೆಲಂಗಾಣದಲ್ಲಿ ಈ ಘಟನೆ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಥಂಡ್ರಾ ಅಕ್ಷಿತಾರಾಣಿ (20) ಎಂದು ಗುರುತಿಸಲಾಗಿದೆ. ಆರೋಪಿ ಉಪನ್ಯಾಸಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಉಪನ್ಯಾಸಕ ನವೀನ್ ಕುಮಾರ್ ಎಂದು ಗುರುತಿಸಲಾಗಿದೆ.
ಮೃತ ಯುವತಿ ನಸ್ಪೂರಿನ ಕಾಲೇಜುವೊಂದರಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುವಾಗ ಲೆಕ್ಚರರ್ ನವೀನ್ ಕುಮಾರ್ ಪರಿಚಯವಾಗಿದ್ದ. ಬಳಿಕ ಅಲ್ಲಿಂದ ಯುವತಿ ಹೈದರಾಬಾದ್‌ಗೆ ಮೈನಿಂಗ್ ಎಂಜಿನಿಯರಿಂಗ್ ಮಾಡಲು ತೆರಳಿದ್ದಳು. ಅಲ್ಲಿ ಅಪ್ರೆಂಟಿಸ್‌ಶಿಪ್ ಸಮಯದಲ್ಲಿ ರವಿ ಕುಮಾರ್ ಎಂಬಾತನ ಪರಿಚಯವಾಗಿತ್ತು. ಬರಬರುತ್ತಾ ನವೀನ್ ಹಾಗೂ ಅಕ್ಷಿತಾರಾಣಿ ನಡುವಿನ ಸಂಬಂಧ ಹದಗೆಟ್ಟಿತ್ತು. ರವಿ ಜೊತೆಗೆ ಸ್ನೇಹ ಬೆಳೆಸುತ್ತಿರುವುದರಿಂದ ಅಕ್ಷಿತಾರಾಣಿ ನನ್ನಿಂದ ದೂರವಾಗುತ್ತಿದ್ದಾಳೆ ಎಂದು ನವೀನ್ ಕೋಪಗೊಂಡಿದ್ದ.
ಸೆ.12ರಂದು ಅಕ್ಷಿತಾರಾಣಿ ಡೆತ್‌ನೋಟ್ ಬರೆದಿಟ್ಟು, ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.
ಆರಂಭದಲ್ಲಿ ಇದನ್ನು ಆತ್ಮಹತ್ಯೆ ಎಂದೇ ನಂಬಲಾಗಿತ್ತು. ಆದರೆ ಪೊಲೀಸರು ಪ್ರಕರಣವನ್ನು ಅಸಹಜ ಸಾವು ಎಂದು ಪರಿಗಣಿಸಿ, ತನಿಖೆ ನಡೆಸಿದಾಗ ಅಸಲಿ ಸತ್ಯ ಬಯಲಾಗಿದೆ.
ಅಕ್ಷಿತಾರಾಣಿ ತನ್ನಿಂದ ದೂರ ಸರಿಯುತ್ತಿರುವುದನ್ನು ಮತ್ತು ರವಿ ಕುಮಾರ್ ಜೊತೆ ಹತ್ತಿರವಾಗುತ್ತಿರುವುದನ್ನು ನವೀನ್ ಸಹಿಸಿಕೊಳ್ಳಲು ಸಾಧ್ಯವಾಗದೇ, ಈ ಕೊಲೆ ಮಾಡಿದ್ದಾನೆ ಎಂದು ಪೆದ್ದಪಲ್ಲಿ ಡಿಸಿಪಿ ಬಿ.ರಾಮ್ ರೆಡ್ಡಿ ಅವರು ತಿಳಿಸಿದ್ದಾರೆ.
ಸೆ.12ರಂದು ಅಕ್ಷಿತಾರಾಣಿ ಮನೆಗೆ ವಾಪಸ್ ಬರುವಾಗ ನವೀನ್ ಕುಮಾರ್ ಅಡ್ಡಗಟ್ಟಿದ್ದನಂತೆ. ಬಲವಂತವಾಗಿ ತನ್ನ ಕಾರಿನಲ್ಲಿ ಕರೆದೊಯ್ದು, ರವಿ ಕುಮಾರ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿ ಪತ್ರ ಬರೆಯುವಂತೆ ಒತ್ತಾಯಮಾಡಿದ್ದ. ಬಳಿಕ ಕೀಟನಾಶಕವನ್ನು ಬಲವಂತವಾಗಿ ಕುಡಿಸಿದ್ದ. ಬಳಿಕ ಅಕ್ಷಿತಾರಾಣಿಗೆ ಕೂಡಲೇ ಸಿಗಬೇಕಿದ್ದ ವೈದ್ಯಕೀಯ ಚಿಕಿತ್ಸೆಗೂ ನವೀನ್ ಉದ್ದೇಶಪೂರ್ವಕವಾಗಿ ತಡಮಾಡಿಸಿದ್ದ.
ನಂತರ ಯುವತಿಯ ಮೊಬೈಲ್ ಮೂಲಕ ತಂದೆಗೆ ಕರೆ ಮಾಡಿ, ತಾನಾಗಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬದವರನ್ನು ನಂಬಿಸಿದ್ದ. ಆನಂತರ ಅಕ್ಷತಾರಾಣಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಮರುದಿನ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಳು.
ಕೊಲೆಯ ರಹಸ್ಯವನ್ನು ಭೇದಿಸಲು ಸಿಸಿಟಿವಿ, ಕಾಲ್ ಲಾಗ್, ಕಾಲ್ ರೆಕಾರ್ಡಿಂಗ್ ಮತ್ತು ಇತರ ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲನೆ ನಡೆಸಿದಾಗ ಪೊಲೀಸರಿಗೆ ಅಸಲಿ ರಹಸ್ಯ ಗೊತ್ತಾಗಿದೆ. ಸದ್ಯ ಪೊಲೀಸರು ಆರೋಪಿ ನವೀನ್ ಕುಮಾರ್ ಹಾಗೂ ರವಿ ಕುಮಾರ್‌ನನ್ನು ಬಂಧಿಸಿದ್ದಾರೆ. ತನಿಖೆ ಮುಂದುವರೆದಿದೆ.






