ಇತರೆ

ಎಸ್‌ಪಿ ಕಚೇರಿ ಕಟ್ಟಡದ 3ನೇ ಮಹಡಿಯಿಂದ ಹಾರಿ ಪೋಕ್ಸೋ ಆರೋಪಿ ದೈಹಿಕ ಶಿಕ್ಷಕ ಆತ್ಮಹತ್ಯೆ

Views: 161

ಕನ್ನಡ ಕರಾವಳಿ ಸುದ್ದಿ: ಪೋಕ್ಸೋ ಪ್ರಕರಣದ ಆರೋಪಿಯಾಗಿದ್ದ ದೈಹಿಕ ಶಿಕ್ಷಕರೊಬ್ಬರು ಎಸ್‌ಪಿ ಕಚೇರಿಯ ಕಟ್ಟಡದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ನಡೆದಿದೆ.

ತಾಲೂಕಿನ ಅಕ್ಕೂರು ಹೊಸಹಳ್ಳಿ ಗ್ರಾಮದ ದೈಹಿಕ ಶಿಕ್ಷಕ ಶಶಿಧರ್ ಆತ್ಮಹತ್ಯೆಗೆ ಶರಣಾದವರು.

ಶಶಿಧ‌ರ್ ವಿರುದ್ಧ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ರಾಮನಗರದ ಮಹಿಳಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಹೆಚ್ಚಿನ ವಿಚಾರಣೆಗಾಗಿ ಬೆಳಗ್ಗೆ ಮೆಡಿಕಲ್ ಪರೀಕ್ಷೆ ಮಾಡಿಸಿ, ಬೆರಳಚ್ಚು ಪಡೆಯಲು ಎಸ್‌ಪಿ ಕಚೇರಿಗೆ ಕರೆತಂದಿದ್ದರು. ಈ ವೇಳೆ ಆರೋಪಿ ಮೂರನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಶಿಧರ್ ಕಳೆದ 15 ವರ್ಷದಿಂದ ಚನ್ನಪಟ್ಟಣ ತಾಲೂಕಿನ ಅನುದಾನಿತ ಪ್ರೌಢಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಘಟನೆ ಕುರಿತು ರಾಮನಗರ ಎಸ್‌ಪಿ ರೋಹನ್ ಜಗದೀಶ್ ಮಾತನಾಡಿ, ಪೋಕ್ಸೋ ಪ್ರಕರಣದ ಆರೋಪಿ ಶಶಿಧ‌ರ್ ಎಂಬಾತನನ್ನು ಬಂಧಿಸಲಾಗಿತ್ತು. ದೈಹಿಕ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಈತನ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಕೇಸ್ ದಾಖಲಾಗಿತ್ತು. ಬಳಿಕ ಆತನನ್ನು ಬಂಧನ ಮಾಡಲಾಗಿತ್ತು. ಕಳೆದ ಎರಡು ವರ್ಷಗಳಿಂದ ಶಶಿಧರ್ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಬಗ್ಗೆ ದೂರು ಕೂಡ ಈತನ ಮೇಲಿತ್ತು. ಐದು ಜನ ಹೆಣ್ಣುಮಕ್ಕಳು ಶಿಕ್ಷಕನ ವಿರುದ್ಧ ಹೇಳಿಕೆ ನೀಡಿದ್ದರು. ಭಾನುವಾರ ಬೆಳಿಗ್ಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮೆಡಿಕಲ್ ಚೆಕಪ್ ಮಾಡಿಸಿ ಎಸ್‌ಪಿ ಕಚೇರಿಯ ಮೂರನೇ ಮಹಡಿಯ ಎಂಸಿಯು ಯುನಿಟ್‌ನಲ್ಲಿ ಬೆರಳಚ್ಚು ದಾಖಲು ಮಾಡಲಾಗಿತ್ತು. ಆಗ ನಮ್ಮ ಕಾನ್‌ಸ್ಟೆಬಲ್‌ಗಳನ್ನು ತಳ್ಳಿ ಮೂರನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Related Articles

Back to top button
error: Content is protected !!