ಅಪ್ರಾಪ್ತ ವಯಸ್ಕಳೊಂದಿಗೆ ಸಮ್ಮತಿಯ ಲೈಂಗಿಕ ಕ್ರಿಯೆಯೂ ಅಪರಾಧ: ಹೈಕೋರ್ಟ್
Views: 73
ಕನ್ನಡ ಕರಾವಳಿ ಸುದ್ದಿ : ಅಪ್ರಾಪ್ತ ವಯಸ್ಕಳೊಂದಿಗೆ ನಡೆಯುವ ಸಮ್ಮತಿಯ ಲೈಂಗಿಕ ಕ್ರಿಯೆಯು ಕಾನೂನಿನ ದೃಷ್ಟಿಯಲ್ಲಿ ಮಾನ್ಯವಾಗುವುದಿಲ್ಲ.ಸಂತ್ರಸ್ತೆಯ ಸಮ್ಮತಿ ಸಿಕ್ಕಿದೆ ಎಂಬ ಕಾರಣಕ್ಕೆ ಕ್ರಿಮಿನಲ್ ಆರೋಪದಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿರುವ ಹೈಕೋರ್ಟ್, ಪೋಕ್ಸೋ ಪ್ರಕರಣದ ಅಪರಾಧಿಯನ್ನು ಖುಲಾಸೆಗೊಳಿಸಿದ್ದ ವಿಚಾರಣ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿ, ಅಪರಾಧಿಗೆ 20 ವರ್ಷಗಳ ಕಠಿನ ಜೈಲು ಶಿಕ್ಷೆ ಹಾಗೂ 1.5 ಲಕ್ಷ ರೂ. ದಂಡ ವಿಧಿಸಿದೆ.
ಪೋಕ್ಸೋ ಪ್ರಕರಣದಲ್ಲಿ ಮಂಡ್ಯದ ಸೆಷನ್ಸ್ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿದ್ದ ಆದೇಶ ಪ್ರಶ್ನಿಸಿ ಸಂತ್ರಸ್ತೆಯ ಪಾಲಕರು ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್ ಪಿ. ಸಂದೇಶ್ ಹಾಗೂ ನ್ಯಾಯಮೂರ್ತಿ ಬಿ. ಪ್ರಮೋದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಸಂತ್ರಸ್ತೆಯ ಜನನ ಪ್ರಮಾಣಪತ್ರ, ಎಸೆಸೆಲ್ಸಿ ಅಂಕಪಟ್ಟಿ ಪ್ರಕಾರ ಘಟನೆ ನಡೆದಾಗ ಬಾಲಕಿಗೆ 16 ವರ್ಷ ವಯಸ್ಸಾಗಿತ್ತು ಎಂಬುದು ಸಾಬೀತಾಗಿದೆ. ಬಾಲಕಿ 18 ವರ್ಷಕ್ಕಿಂತ ಕಡಿಮೆಯಿದ್ದಾಗ ಆಕೆಯ ಸಮ್ಮತಿ ಇದೆಯೋ, ಇಲ್ಲವೋ ಎಂಬುದು ಕಾನೂನಿನಲ್ಲಿ ಮುಖ್ಯವಾಗುವುದಿಲ್ಲ. ಅಪ್ರಾಪ್ತ ವಯಸ್ಕಳ ಸಮ್ಮತಿಯನ್ನು ರಕ್ಷಣೆಯಾಗಿ ಪಡೆಯಲು ಅಪರಾಧಿಗೆ ಯಾವುದೇ ಹಕ್ಕಿರುವುದಿಲ್ಲ ಎಂದು ನ್ಯಾಯಪೀಠ ವಿವರಿಸಿದೆ






