ಸೇತುವೆ ಮೇಲೆ ಮೂರು ವರ್ಷದ ಮಗುವನ್ನು ಬಿಟ್ಟು ನದಿಗೆ ಹಾರಿದ ದಂಪತಿ!
Views: 105
ಕನ್ನಡ ಕರಾವಳಿ ಸುದ್ದಿ: ಅಳುತ್ತಿದ್ದ ಮೂರು ವರ್ಷದ ಮಗುವನ್ನು ಒಂಟಿಯಾಗಿ ಸೇತುವೆಯ ಮೇಲೆ ಬಿಟ್ಟು ಹರಿಯುತ್ತಿದ್ದ ಗೋದಾವರಿ ನದಿಗೆ ದಂಪತಿ ಹಾರಿರುವ ಘಟನೆ ಗುರುವಾರ ತಡರಾತ್ರಿ ಅಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.
ವೆಲ್ಪುರ ಗ್ರಾಮದ ನಿವಾಸಿಗಳಾದ ದೊಡ್ಡ ಸಾಯಿ (29) ಹಾಗೂ ಅವರ ಪತ್ನಿ ಶ್ರೀಶಾ (28) ನೀರಿಗೆ ಹಾರಿದ ದಂಪತಿ.
ರಾತ್ರಿ ಸುಮಾರು 10 ಗಂಟೆಗೆ ದಂಪತಿಗಳು ತಮ್ಮ ಪುಟ್ಟ ಮಗುವಿನೊಂದಿಗೆ ಸ್ಕೂಟರ್ ನಲ್ಲಿ ಗೋದಾವರಿ ಸೇತುವೆ ಬಳಿಗೆ ಬಂದಿದ್ದಾರೆ. ಮಗುವನ್ನು ಸ್ಕೂಟರ್ ನಲ್ಲಿಯೇ ಬಿಟ್ಟಿರುವ ದಂಪತಿ, ಉಕ್ಕಿ ಹರಿಯುತ್ತಿದ್ದ ಗೋದಾವರಿ ನದಿಗೆ ಹಾರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂರು ವರ್ಷದ ಮಗುವನ್ನು ಕತ್ತಲೆ ಹಾಗೂ ಚಳಿಯಲ್ಲಿ ಬಿಟ್ಟು ದಂಪತಿಗಳು ನದಿಗೆ ಹಾರಿದ್ದಾರೆ. ಮಗು ಅಳುತ್ತಿರುವುದನ್ನು ಗಮನಿಸಿದ ದಾರಿಹೋಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಮಗು ಹಾಗೂ ಸ್ಕೂಟರ್ ಅನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಬಳಿಕ, ಮಗುವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ. ಇದರ ಬೆನ್ನಿಗೇ, ದಂಪತಿ ಪತ್ತೆಗೆ ಶೋಧ ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗಿದೆ.
ಪೊಲೀಸರೊಂದಿಗೆ ಸ್ಥಳೀಯ ಸ್ವಯಂಸೇವಕರು, ಈಜು ಪಟುಗಳು ಹಾಗೂ ದೋಣಿ ತಂಡಗಳು ನದಿಯಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿವೆ. ದಂಪತಿಯನ್ನು ಪತ್ತೆ ಹಚ್ಚುವ ಪ್ರಯತ್ನ ಇನ್ನೂ ಮುಂದುವರಿದಿದೆ ಎಂದು ವರದಿಯಾಗಿದೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ






