ಅಸಹಜ ಸಾವಿನ ಪ್ರಕರಣಕ್ಕೆ ತನಿಖೆಯಲ್ಲಿ ಹೊಸ ತಿರುವು; ಪತಿ ಬಂಧನ
Views: 40
ಕನ್ನಡ ಕರಾವಳಿ ಸುದ್ದಿ: ವಿವಾಹಿತೆ ಮೃತಪಟ್ಟಿದ್ದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಆರಂಭದಲ್ಲಿ ಅಸಹಜ ಸಾವು ಎಂದು ದಾಖಲಾಗಿದ್ದ ಪ್ರಕರಣದ ತನಿಖೆ ಮುಂದುವರಿದಂತೆ, ಮಹಿಳೆಯ ಸಾವಿನ ಹಿಂದೆ ಕೊಲೆ ನಡೆದಿರುವ ಶಂಕೆ ದೃಢಪಟ್ಟಿದ್ದು, ಪೊಲೀಸರು ಆಕೆಯ ಪತಿಯನ್ನು ಬಂಧಿಸಿದ್ದಾರೆ.
ಮೃತರನ್ನು ಜೋಯಿಡಾ ತಾಲೂಕಿನ ನಂದಿಗದ್ದೆ ನಿವಾಸಿ ಹರಿಶ್ಚಂದ್ರ ದೇಸಾಯಿ ಅವರ ಪುತ್ರಿ ಹಾಗೂ ದೊಡ್ಡಗುಂದದ ನಿವಾಸಿ ಮಂಗಳಾ ನಾಯ್ಕ (27) ಎಂದು ಗುರುತಿಸಲಾಗಿದೆ.
ಆಗಸ್ಟ್ 25ರಂದು ಮಂಗಳಾ ಮೃತಪಟ್ಟಿದ್ದರು. ಬೆಳಗಿನ ಜಾವ ರಕ್ತ ವಾಂತಿ ಮಾಡಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಆಸ್ಪತ್ರೆಗೆ ತಲುಪುವ ಮುನ್ನವೇ ಅವರು ಮೃತಪಟ್ಟಿದ್ದಾರೆ ಎಂದು ಪತಿ ಗಣಪತಿ ನಾಯ್ಕ ಪೊಲೀಸರಿಗೆ ಮಾಹಿತಿ ನೀಡಿದ್ದ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಮೊದಲಿಗೆ ಮಂಕಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು. ಆದರೆ ಮಂಗಲಾ ಸಾವಿನ ಕುರಿತು ಆಕೆಯ ತವರು ಮನೆಯವರು ಅನುಮಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣದ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದಾಗ, ಇದು ಅಸಹಜ ಸಾವಲ್ಲ, ಕೊಲೆ ಪ್ರಕರಣವಾಗಿರಬಹುದೆಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.






