ಒಂದೇ ಕುಟುಂಬದ ಆರು ಮೃತದೇಹಗಳು ಕೆರೆಯಲ್ಲಿ ಪತ್ತೆ! ಆಕಸ್ಮಿಕವೋ..ಸಾಮೂಹಿಕ ಆತ್ಮಹತ್ಯೆಯೋ!
Views: 44
ಕನ್ನಡ ಕರಾವಳಿ ಸುದ್ದಿ: ಒಂದೇ ಕುಟುಂಬಕ್ಕೆ ಸೇರಿದ ಆರು ಜನರ ಮೃತದೇಹಗಳು ವಿಜಯಪುರ ನಗರದ ಹೊರವಲಯದಲ್ಲಿರುವ ಐತಿಹಾಸಿಕ ಪ್ರವಾಸಿ ತಾಣವಾದ ಭೂತನಾಳ ಕೆರೆಯಲ್ಲಿ ಪತ್ತೆಯಾಗಿದೆ.
ಮೃತರ ಪೈಕಿ ಐವರು ಅಪ್ರಾಪ್ತ ಮಕ್ಕಳು ಹಾಗೂ ಒಬ್ಬ ಮಹಿಳೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಕೆರೆಯ ಅಂಚಿನಲ್ಲಿ ಶವಗಳು ತೇಲುತ್ತಿರುವುದನ್ನು ನೋಡಿ ಸ್ಥಳೀಯರು ಆಘಾತಗೊಂಡಿದ್ದಾರೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ
ಮಾಹಿತಿ ಸಿಕ್ಕ ತಕ್ಷಣವೇ ಸ್ಥಳಕ್ಕಾಗಮಿಸಿದ ನಗರ ಡಿವೈಎಸ್ಪಿ ನಾಗರಾಜ್, ಆದರ್ಶ ನಗರ ಪಿಎಸ್ಐ ಸೀತಾರಾಮ ಲಮಾಣಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಲೇ ಕಾರ್ಯಾಚರಣೆ ನಡೆಸಿ, ಮಕ್ಕಳು ಮತ್ತು ಮಹಿಳೆ ಸೇರಿ ಒಟ್ಟು ಆರು ಮೃತದೇಹಗಳನ್ನು ಹೊರತೆಗೆದರು.
ಮೃತರನ್ನು ಶೋಭಾ ಜಾಲಗೇರಿ (45) ಹಾಗೂ ಆಕೆಯ ಮಕ್ಕಳಾದ ವಿದ್ಯಾ (16), ಸುವರ್ಣ (14), ಗೌಡೇಶ್ (10), ವಿಕಾಸ (5) ಮತ್ತು ಸಾನಿಕಾ (7) ಎಂದು ಗುರುತಿಸಲಾಗಿದೆ.
ಆಗಸ್ಟ್ 24 ರಿಂದ ಈ ಕುಟುಂಬ ಕಾಣೆಯಾಗಿತ್ತು ಎಂದು ಹೇಳಲಾಗಿದೆ.
ಇದು ಸಾಮೂಹಿಕ ಆತ್ಮಹತ್ಯೆಯೋ ಅಥವಾ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಂಭವಿಸಿದ ದುರಂತವೋ ಅಥವಾ ಯಾರಾದರೂ ಹತ್ಯೆ ಮಾಡಿ ಕೆರೆಗೆ ಎಸೆದಿದ್ದಾರೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮರಣೋತ್ತರ ಪರೀಕ್ಷೆ ಹಾಗೂ ಪೊಲೀಸ್ ತನಿಖೆಯ ನಂತರ ಈ ಆರು ಮಂದಿಗೆ ದುರಂತ ಸಾವಿಗೆ ಕಾರಣವೇನು ಎಂಬುದು ತಿಳಿದು ಬರಲಿದೆ. ಸದ್ಯ, ಆದರ್ಶ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.






