ಡೇವಿಡ್ ಶೂಟೌಟ್ ಪ್ರಕರಣಕ್ಕೆ ಹೊಸ ತಿರುವು:ಗುತ್ತಿಗೆ ಕೈತಪ್ಪಿದಕ್ಕಾಗಿ ಕಿಶೋರ್ ಪೂಜಾರಿಯಿಂದ ಸುಪಾರಿ…!
Views: 0
ಕನ್ನಡ ಕರಾವಳಿ ಸುದ್ದಿ :ಮುದರಂಗಡಿ ಗ್ರಾ.ಪಂ ಮಾಜಿ ಅಧ್ಯಕ್ಷ, ಉದ್ಯಮಿ, ಗುತ್ತಿಗೆದಾರ ಡೇವಿಡ್ ಡಿಸೋಜ ಶೂಟ್ಔಟ್ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಅದಾನಿ ಯುಪಿಸಿಎಲ್ನ ಗುತ್ತಿಗೆ ಕೈತಪ್ಪಿದ ಕಾರಣಕ್ಕಾಗಿ ಗುತ್ತಿಗೆದಾರ ಕಿಶೋರ್ ಪೂಜಾರಿ, ತನ್ನ ಸಹೋದರ ಭೂಗತ ಪಾತಕಿ ಹೇಮಂತ್ ಪೂಜಾರಿ ಮೂಲಕ ಈ ಕೃತ್ಯ ಎಸಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಶೂಟೌಟ್ ಪ್ರಕರಣದ ಬೆಳವಣಿಗೆಯ ಮಾಹಿತಿಗಳನ್ನು ನೀಡಿದರು.
ಉಚ್ಚಿಲ ನಿವಾಸಿ ಕಿಶೋರ್ ರಾಮ ಪೂಜಾರಿ ಈ ಹಿಂದೆ ಯುಪಿಸಿಎಲ್ ನಲ್ಲಿ ಗುತ್ತಿಗೆದಾರರಾಗಿ ಕೆಲಸ ಮಾಡಿಕೊಂಡಿದ್ದನು. ಆರು ತಿಂಗಳ ಹಿಂದೆ ಎರ್ಮಾಳಿನಲ್ಲಿ ಯುಪಿಸಿಎಲ್ ಕಂಪೆನಿಯ ಪೈಪ್ಲೈನ್ ಮತ್ತು ಕಾಂಕ್ರಿಟ್ ರಸ್ತೆ ಕಾಮಗಾರಿ ಯೋಜನೆಯ ಗುತ್ತಿಗೆಯನ್ನು ತನಗೆ ನೀಡುವಂತೆ ಕಿಶೋರ್ ಪೂಜಾರಿ ಕೇಳಿ ಕೊಂಡಿದ್ದನು. ಅದಕ್ಕೆ ಕಂಪೆನಿಯವರು ಕೂಡ ಒಪ್ಪದೆ ಡೇವಿಡ್ ಡಿಸೋಜಗೆ ನೀಡಿದ್ದರು. ಈ ಕೋಟ್ಯಂತರ ರೂ. ಮೊತ್ತದ ಯೋಜನೆ ಕೈತಪ್ಪಿ ಹೋದ ಸಿಟ್ಟಿನಲ್ಲಿ ಕಿಶೋರ್ ಪೂಜಾರಿ, ಡೇವಿಡ್ ಡಿಸೋಜರನ್ನು ಕೊಲೆ ಮಾಡುವ ಈ ಕೃತ್ಯಕ್ಕೆ ಸಂಚು ರೂಪಿಸಿದ್ದಾನೆ.
ಅಗಸ್ಟ್ 7ರಂದು ನಡೆದ ಕೃತ್ಯಕ್ಕೆ ಸಂಬಂಧಿಸಿ ತನಿಖೆ ನಡೆಸಿದ ಪೊಲೀಸರು, ಪ್ರಕರಣದಲ್ಲಿ ನೇರವಾಗಿ ಭಾಗಿಯಾದ ಆರೋಪಿ ಗಳಾದ ರಾಜು, ಅನ್ಮೋಲ್ ರಸ್ತೋಗಿ ಮತ್ತು ಜಿಯಾಹುಲ್ ಶೇಖ್ರನ್ನು ಬಂಧಿಸಿ, ಅನ್ಮೋಲ್ ಮತ್ತು ಜಿಯಾಹುಲ್ನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಯಿತು. ಈ ತನಿಖೆಯಿಂದ ಗುತ್ತಿಗೆಗೆ ಸಂಬಂಧಿಸಿ ಕೋಟ್ಯಂತರ ಹಣಕಾಸಿನ ವಿಚಾರವಾಗಿ ಇವರಿಬ್ಬರಿಗೆ ಡೀಲ್ ನೀಡಿರುವ ವಿಚಾರ ಬೆಳಕಿಗೆ ಬಂತು.
ಅಲ್ಲದೆ ಬಂಧಿತರ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಇವರ ಖಾತೆಗೆ ಮೊಹಮ್ಮದ್ ಇರ್ಷಾದ್, ಚಿರಾಗ್ ಪೂಜಾರಿ ಹಾಗೂ ಸದಾನಂದ ದೇವಾಡಿಗ ಹಣ ಜಮಾ ಮಾಡಿ ಕೃತ್ಯಕ್ಕೆ ಸಹಕರಿಸಿರುವುದು ಕಂಡುಬಂತು. ಅದರಂತೆ ಅವರನ್ನು ಬಂಧಿಸಿ, ತನಿಖೆ ಮುಂದುವರೆಸಿದಾಗ ಇವರೆಲ್ಲರಿಗೂ ಹಣಕಾಸಿನ ವ್ಯವಸ್ಥೆ ಮಾಡಿರುವುದು ಹಾಗೂ ಕೃತ್ಯಕ್ಕೆ ಸೂಪಾರಿ ನೀಡಿರುವುದು ಎರ್ಮಾಳಿನ ಗುತ್ತಿಗೆದಾರ ಕಿಶೋರ್ ಪೂಜಾರಿ ಎಂಬುದು ಪತ್ತೆಯಾಯಿತು ಎಂದು ಅವರು ತಿಳಿಸಿದರು.
ಉತ್ತರ ಭಾರತದ ರಾಜ್ಯದಲ್ಲಿ ತನಿಖೆ ನಡೆಸುತ್ತಿದ್ದ ಪೊಲೀಸ್ ತಂಡ ಆರೋಪಿಗಳಿಗೆ ಹಣಕಾಸಿನ ವ್ಯವಸ್ಥೆ ಮಾಡಿರುವ ಬಿಹಾರದ ಸೂರಜ್ ಕುಮಾರ್ ಎಂಬಾತನನ್ನು ಉತ್ತರಖಾಂಡ್ನಲ್ಲಿ ಬಂಧಿಸಿ, ತೀವ್ರ ವಿಚಾರಣೆಗೆ ಒಳಪಡಿಸಿತು. ಆಗ ಈ ಕೊಲೆಯಲ್ಲಿ ನೇರವಾಗಿ ಭಾಗಿಯಾಗಿರುವ ಮೂವರು ಶೂಟರ್ಗಳನ್ನು ವ್ಯವಸ್ಥೆ ಮಾಡಿರುವ ಅನೂಜ್ ಬಗ್ಗೆ ಮಾಹಿತಿ ದೊರೆತಿದೆ.
ಅನೂಜ್ ಭಾರತದ ವಿವಿಧೆಡೆ ತಿರುಗಾಡುತ್ತಿರುವುದರಿಂದ ಆತನ ಪತ್ತೆ ದೊಡ್ಡ ಸವಾಲು ಆಗಿತ್ತು. ಸೂರಜ್ ಕುಮಾರ್ ಕೊಟ್ಟ ಮಾಹಿತಿಯಂತೆ ತನಿಖೆ ನಡೆಸಿದ ಪೊಲೀಸರು ಬೆಳಗಾವಿಯ ನಿಪ್ಪಾಣಿಯಲ್ಲಿ ಅನೂಜ್ನನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಡೇವಿಡ್ ಡಿಸೋಜ ಹತ್ಯೆಗಾಗಿ ಕಿಶೋರ್ ಪೂಜಾರಿ 10 ಲಕ್ಷ ರೂ. ಮೊತ್ತದ ಸುಪಾರಿ ನೀಡಿದ್ದನು ಎಂದು ತನಿಖೆಯಿಂದ ತಿಳಿದುಬಂದಿದೆ. ಹೀಗೆ ಮೂವರು ಶೂಟರ್ಗಳ ಖಾತೆಗೆ ಹಣ ಕೂಡ ಪಾವತಿಯಾಗಿತ್ತು. ಇದಕ್ಕಾಗಿ ಅನೂಜ್ನನ್ನು ಸಂಪರ್ಕಿಸಲಾಗಿತ್ತು. ಆತ ಮೊದಲು ಇಬ್ಬರು ಶೂಟರ್ಗಳೊಂದಿಗೆ ಮಾತುಕತೆ ನಡೆಸಿದ್ದನು. ಆದರೆ ಹಣದ ವಿಚಾರದಲ್ಲಿ ಅವರು ಈ ಡೀಲ್ಗೆ ಒಪ್ಪದೆ ವಾಪಾಸ್ಸು ಹೋಗಿದ್ದರು. ಇದೀಗ ಆ ಇಬ್ಬರು ಶೂಟರ್ಗಳು ಬೇರೆ ಪ್ರಕರಣದಲ್ಲಿ ಗುಜರಾತ್ ಪೊಲೀಸರಿಂದ ಬಂಧಿತರಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಅದನ್ನು ಇನ್ನಷ್ಟೇ ಖಚಿತ ಪಡಿಸಬೇಕಾಗಿದೆ. ಅವರು ಇದರಲ್ಲಿ ಭಾಗಿಯಾಗದಿದ್ದರೂ, ಸಂಚಿನಲ್ಲಿ ಸೇರಿಕೊಂಡಿದ್ದಾರೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದರು.
ಆರಂಭದಲ್ಲಿ ಈ ಪ್ರಕರಣದ ಬಗ್ಗೆ ತನಿಖೆ ಮಾಡುವಾಗ ಪಂಜಾಬ್ ಮೂಲದ ಗುತ್ತಿಗೆ ಕಂಪೆನಿ ಇದರ ಹಿಂದೆ ಇರುವ ಬಗ್ಗೆ ಸಂಶಯ ಮೂಡಿತ್ತು. ಅದೇ ರೀತಿ ಕೇರಳದ ಕಂಪೆನಿಯ ಬಗ್ಗೆಯೂ ಗುಮಾನಿ ಇತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಈ ಎರಡೂ ಕಂಪೆನಿಗಳು ಈ ಕೃತ್ಯಕ್ಕೆ ಯಾವುದೇ ಹಣಕಾಸಿನ ನೆರವು ನೀಡಿರುವುದು ಕಂಡು ಬಂದಿಲ್ಲ ಎಂದು ಅವರು ಮಾಹಿತಿ ನೀಡಿದರು.
ಎರ್ಮಾಳಿನ ಪ್ರಾಜೆಕ್ಟ್ನ್ನು ಕಿಶೋರ್ ಪೂಜಾರಿಗೆ ನೀಡಬೇಕೆಂದು ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಿನಲ್ಲಿ ಇಂಟರ್ನೆಟ್ ಮೂಲಕ ಯುಪಿಸಿಎಲ್ ಅಧಿಕಾರಿಗಳು ಹಾಗೂ ಡೇವಿಡ್ ಡಿಸೋಜಗೆ ಕರೆ ಬಂದಿತ್ತು. ಆದರೆ ಅವರು ಯಾರು ಇದಕ್ಕೆ ಒಪ್ಪಿರಲಿಲ್ಲ.
ಈ ಹಿನ್ನೆಲೆಯಲ್ಲಿ ಅದೇ ವ್ಯಕ್ತಿ ಇರ್ಷಾದ್, ಚಿರಾಗ್ ಹಾಗೂ ಸದಾನಂದ ಅವರಿಗೂ ಕರೆ ಮಾಡಿ ಮಾತುಕತೆ ನಡೆಸಿರುವುದು ತನಿಖೆಯಿಂದ ತಿಳಿದು ಬಂದಿದೆ. ಶೂಟರ್ಗಳು, ಅವರೊಂದಿಗೆ ಸಮನ್ವಯ ಸಾಧಿಸಿರುವ ಅನೂಜ್ ಜೊತೆಯೂ ಹೇಮಂತ್ ಪೂಜಾರಿ ಸಂಪರ್ಕದಲ್ಲಿದ್ದನು ಎಂಬುದು ಕಂಡು ಬಂದಿದೆ. ಹೀಗೆ ಇವರೆಲ್ಲರು ಸೇರಿ ಡೇವಿಡ್ ಡಿಸೋಜ ಕೊಲೆಗೆ ಆರು ತಿಂಗಳ ಹಿಂದೆಯೇ ಸಂಚು ರೂಪಿಸಿದ್ದರು. ಈ ಪ್ರಕರಣದಲ್ಲಿ ನನ್ನ ಅಣ್ಣ ಹೇಮಂತ್ ಪೂಜಾರಿ ಭಾಗಿಯಾಗಿದ್ದಾನೆ ಎಂದು ಕಿಶೋರ್ ಪೂಜಾರಿ ಹೇಳಿದ್ದಾನೆ. ಅದೇ ರಾತ್ರಿ ಆತ, ನಾವಿಬ್ಬರು ಹಲವು ವರ್ಷಗಳಿಂದ ಮಾತನಾಡುತ್ತಿಲ್ಲ ಎಂದು ಕೂಡ ತಿಳಿಸಿದ್ದಾನೆ. ಹಾಗಾಗಿ ಈ ಪ್ರಕರಣದಲ್ಲಿ ಹೇಮಂತ್ ಪೂಜಾರಿ ಭಾಗಿಯಾಗಿದ್ದಾನೆಯೇ ಎಂಬುದು ಇನ್ನೂ ನಮಗೆ ಸ್ಪಷ್ಟತೆ ಸಿಕ್ಕಿಲ್ಲ. ಆ ಬಗ್ಗೆ ತನಿಖೆ ಮಾಡಬೇಕಾಗಿದೆ’ ಎಸ್ಪಿ ಹರಿರಾಂ ಶಂಕರ್ ತಿಳಿಸಿದರು.
ಹೇಮಂತ್ ಪೂಜಾರಿ ಕಳೆದ 10 ವರ್ಷಗಳಿಂದ ಯಾವುದೇ ಬೆದರಿಕೆ ಕರೆಗಳನ್ನು ಮಾಡಿರುವುದು ವರದಿಯಾಗಿಲ್ಲ. ಆತ ಈವರೆಗೆ ಯಾವುದೇ ಪ್ರಕರಣದಲ್ಲಿಯೂ ಬಂಧಿತನಾಗಿಲ್ಲ. ಕಳೆದ 25ವರ್ಷಗಳಿಂದ ತಲೆಮರೆಸಿ ಕೊಂಡಿದ್ದಾನೆ. ಕಿಶೋರ್ ಪೂಜಾರಿ ವಿರುದ್ಧ ಎರಡು ಕೊಲೆ ಪ್ರಕರಣಗಳು ಕೂಡ ಇವೆ. ಹೇಮಂತ್ ಪೂಜಾರಿ ಜೊತೆ ಸೇರಿ ಕೆಲವು ಅಪರಾಧ ಎಸಗಿರುವುದು ತಿಳಿದುಬಂದಿದೆ ಎಂದು ಅವರು ಮಾಹಿತಿ ನೀಡಿದರು.
ಈ ಪ್ರಕರಣದಲ್ಲಿ ಶೂಟರ್ಗಳನ್ನು ವ್ಯವಸ್ಥೆ ಮಾಡಿದ್ದ ಮುಂಬೈನ ನಟೋರಿಯಸ್ ಗ್ಯಾಂಗ್ಸ್ವಾರ್, ಬಿಹಾರ ರಾಜ್ಯದ ನಳಂದ ನಿವಾಸಿ ಅನುಜ್ ಪಾಟೀಲ್ (35) ಎಂಬಾತನನ್ನು ಪೊಲೀಸರು ಇಂದು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಎಂಬಲ್ಲಿ ಬಂಧಿಸಿದರು.






