ಡೇವಿಡ್ ಶೂಟೌಟ್ ಪ್ರಕರಣ: ಹೆಬ್ರಿಯಲ್ಲಿ ಪರಾರಿಯಾಗಲು ಯತ್ನಿಸಿದ ಪ್ರಮುಖ ಆರೋಪಿ ಕಾಲಿಗೆ ಗುಂಡೇಟು
Views: 108
ಕನ್ನಡ ಕರಾವಳಿ ಸುದ್ದಿ: ಮುದರಂಗಡಿಯಲ್ಲಿ ಡೇವಿಡ್ ಮೇಲೆ ಶೂಟೌಟ್ ನಡೆಸಿದ್ದ ರಾಜು ಹಾಗೂ ಆತನ ಸಹಚರರ ತಂಡವನ್ನು ಕಳುಹಿಸಿಕೊಟ್ಟಿದ್ದ ಪ್ರಮುಖ ಆರೋಪಿ ಅನೂಜ್ ಎಂಬಾತನನ್ನು ಪೊಲೀಸರು ಹೆಬ್ರಿ ಸಮೀಪ ವಶಕ್ಕೆ ಪಡೆದಿದ್ದರು. ಸೋಮವಾರ ಆತನನ್ನು ಸ್ಥಳ ಮಹಜರು ಹಾಗೂ ವಿಚಾರಣೆ ಸಂಬಂಧ ಕರೆದೊಯ್ಯುತ್ತಿದ್ದಾಗ, ಹೆಬ್ರಿ ಬಳಿ ಮೂತ್ರ ವಿಸರ್ಜನೆಗೆಂದು ಕೆಳಗಿಳಿದಿದ್ದಾನೆ. ಈ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಪೊಲೀಸರು ಸರ್ವಿಸ್ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾರೆ. ಕಾಲಿಗೆ ಗುಂಡೇಟು ಬಿದ್ದು ಗಾಯಗೊಂಡಿರುವ ಆತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗುಂಡೇಟು ತಿಂದ ಆರೋಪಿ ಅನೂಜ್ ಗುಜರಾತ್, ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ದಾನೆ. ಕೊಲೆಗೆ ಸುಪಾರಿ ಪಡೆಯುವುದು ಹಾಗೂ ಅಕ್ರಮ ಶಸ್ತ್ರಾಸ್ತ್ರ ಸರಬರಾಜು ಮಾಡುವ ದಂಧೆಯಲ್ಲಿ ತೊಡಗಿದ್ದ ಈತನ ಪತ್ತೆಗೆ ಉಡುಪಿ ಜಿಲ್ಲಾ ಪೊಲೀಸರ ತಂಡ ಬರೋಬ್ಬರಿ 2,471 ಕಿ.ಮೀ.ಗೂ ಹೆಚ್ಚು ದೂರ ಕಾರ್ಯಾಚರಣೆ ನಡೆಸಿ ಕೊನೆಗೂ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ.






