ಬಾಂಗ್ಲಾದೇಶದಲ್ಲಿ ಒಂದೇ ಕುಟುಂಬದ ನಾಲ್ವರು ನಿಗೂಢ ಸಾವು: ಉಸಿರುಗಟ್ಟಿಸಿ ಭೀಕರ ಕೊಲೆ ಶಂಕೆ!
Views: 31
ಕನ್ನಡ ಕರಾವಳಿ ಸುದ್ದಿ: ಬಾಂಗ್ಲಾದೇಶದ ರಂಗ್‌ಪುರ್ ನಗರದಲ್ಲಿ ನಿವೃತ್ತ ಶಾಲಾ ಶಿಕ್ಷಕರೊಬ್ಬರು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಹಿಂದೂಗಳು ತಮ್ಮದೇ ಮನೆಯಲ್ಲಿ ಶವವಾಗಿ ಪತ್ತೆಯಾಗಿರುವುದು ಸ್ಥಳೀಯರು ತೀವ್ರ ಆಘಾತಗೊಂಡಿದ್ದಾರೆ.
ಮೃತರನ್ನು ರಂಗ್‌ಪುರ ಜಿಲ್ಲಾ ಶಾಲೆಯ ನಿವೃತ್ತ ಶಿಕ್ಷಕ ಗಣಪತಿ ಚಕ್ರವರ್ತಿ (65), ಅವರ ಪತ್ನಿ ಪ್ರೀತಿಲತಾ ಚಕ್ರವರ್ತಿ (50), ಪುತ್ರಿ ಆಗಮಿ ಚಕ್ರವರ್ತಿ ಪ್ರಾರ್ಥಿ (23) ಹಾಗೂ 12 ವರ್ಷದ ಪುತ್ರ ಪ್ರಿಯಂ ಚಕ್ರವರ್ತಿ ಎಂದು ಗುರುತಿಸಲಾಗಿದೆ.
ಶನಿವಾರ ರಾತ್ರಿ ಸುಮಾರು 11.30ರ ವೇಳೆಗೆ ಮನೆಯ ಬೀಗ ಮುರಿದು ಪೊಲೀಸರು ಒಳ ಪ್ರವೇಶಿಸಿದಾಗ ನಾಲ್ವರ ಮೃತದೇಹಗಳು ಪತ್ತೆಯಾಗಿವೆ. ಪ್ರೀತಿಲತಾ ಮತ್ತು ಆಗಮಿ ಅವರ ಮೃತದೇಹಗಳು ಮೆಟ್ಟಿಲುಗಳ ಬಳಿ ಪತ್ತೆಯಾಗಿದ್ದರೆ, ಗಣಪತಿ ಅವರ ಮೃತದೇಹ ಛಾವಣಿಯಲ್ಲಿ ಪತ್ತೆಯಾಗಿದೆ. 12 ವರ್ಷದ ಪ್ರಿಯಂನ ಮೃತದೇಹ ಹಾಸಿಗೆಯ ಕೆಳಗೆ ದೊರೆತಿದೆ.
ಪ್ರಾಥಮಿಕ ತನಿಖೆಯಲ್ಲಿ ನಾಲ್ವರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಗುರುವಾರ ಮಧ್ಯರಾತ್ರಿಯಿಂದ ಶುಕ್ರವಾರ ಮುಂಜಾನೆ ನಡುವೆ ಈ ಕೃತ್ಯ ನಡೆದಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.
ಬೀಗ ಹಾಕಿದ್ದ ಮನೆಯೊಳಗೆ ಪತ್ತೆಯಾದ ಶವಗಳ ಪ್ರಕರಣವು ಈಗ ಭಾರಿ ತಿರುವು ಪಡೆದುಕೊಂಡಿದ್ದು, ದುಷ್ಕರ್ಮಿಗಳು ನಾಲ್ವರನ್ನು ಹಗ್ಗದಿಂದ ಉಸಿರುಗಟ್ಟಿಸಿ ಭೀಕರವಾಗಿ ಕೊಲೆ ಮಾಡಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ಪೊಲೀಸರು ಶಂಕಿಸಿದ್ದಾರೆ. ಮೃತರಾದವರು ಹಿಂದೂ ಕುಟುಂಬಕ್ಕೆ ಸೇರಿದವರಾಗಿರುವುದರಿಂದ ಈ ಘಟನೆಯು ಸ್ಥಳೀಯವಾಗಿ ಭಾರಿ ಆಕ್ರೋಶ ಹಾಗೂ ಸಂಚಲನಕ್ಕೆ ಕಾರಣವಾಗಿದೆ.
ಗುರುವಾರ ರಾತ್ರಿಯಿಂದಲೇ ಈ ಕುಟುಂಬದ ಎಲ್ಲಾ ಸದಸ್ಯರ ಮೊಬೈಲ್ ಫೋನ್‌ಗಳು ನಿರಂತರವಾಗಿ ಸ್ವಿಚ್‌ಆಫ್ ಆಗಿದ್ದವು. ಇದರಿಂದ ಅನುಮಾನಗೊಂಡ ಸಂಬಂಧಿಕರು ಶನಿವಾರ ರಾತ್ರಿ ಅವರ ಮನೆಗೆ ನೇರವಾಗಿ ಬಂದಿದ್ದಾರೆ. ಆದರೆ, ಮನೆಯ ಮುಖ್ಯ ಬಾಗಿಲಿಗೆ ಹೊರಗಿನಿಂದ ಬೀಗ ಹಾಕಿದ್ದು, ಒಳಗೆ ದೀಪಗಳು ಆರಿಹೋಗಿದ್ದವು. ಕೂಡಲೇ ಅವರು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ, ಬೀಗ ಒಡೆದು ಒಳಗೆ ಪ್ರವೇಶಿಸಿದಾಗ ಈ ದೃಶ್ಯ ಕಂಡು ಬಂದಿದೆ.






