ಮೃತಪಟ್ಟ ಭಿಕ್ಷುಕಿ ಮನೆಯಲ್ಲಿ ಮೂಟೆಗಟ್ಟಲೆ ಹಣ ಪತ್ತೆ!
Views: 31
ಕನ್ನಡ ಕರಾವಳಿ ಸುದ್ದಿ: ಮಂಡ್ಯ ನಗರದ ಗುತ್ತಲು ಬಡಾವಣೆಯ ನಿವಾಸಿ, ಭಿಕ್ಷಾಟನೆ ಮಾಡುತ್ತಿದ್ದ ನೂರ್ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ವೃದ್ಧೆಯ ಸಾವಿನ ನಂತರ ಸಂಬಂಧಿಕರು ಹಾಗೂ ಸ್ಥಳೀಯರು ಸೇರಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ನಂತರ, ಅವರ ಮನೆಗೆ ತೆರಳಿ ಪರಿಶೀಲಿಸಿದಾಗ ಅಲ್ಲಿದ್ದ ದೃಶ್ಯ ಕಂಡು ಎಲ್ಲರೂ ಶಾಕ್ ಆಗಿದ್ದಾರೆ.
ಹೌದು, ಮನೆಯವರು ತನ್ನನ್ನು ನೋಡಿಕೊಳ್ಳುತ್ತಿಲ್ಲ ಎಂದು ಹೇಳಿ ಹಲವು ವರ್ಷಗಳಿಂದ ವೃದ್ಧೆ ರಸ್ತೆಗಳಲ್ಲಿ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದರು. ಭಿಕ್ಷಾಟನೆ ಮಾಡಿದ್ದ ಹಣವನ್ನು ಮನೆಯಲ್ಲೇ ವೃದ್ಧೆ ಸಂಗ್ರಹಿಸಿಟ್ಟಿದ್ದಳು. ಸಂಬಂಧಿಕರು ಮನೆ ಪರಿಶೀಲನೆ ಮಾಡಿದಾಗ ಮೂಟೆಗಟ್ಟಲೆ ನಾಣ್ಯಗಳು ಮತ್ತು ನೋಟುಗಳು ಪತ್ತೆಯಾಗಿವೆ. ಎಣಿಕೆ ಮಾಡಿದಾಗ ಒಟ್ಟು 8 ಲಕ್ಷ ರೂಪಾಯಿಗೂ ಹೆಚ್ಚಿನ ಹಣ ಇರುವುದಾಗಿ ತಿಳಿದುಬಂದಿದೆ.
ನಂತರ ಸ್ಥಳೀಯರು ಮಾತುಕತೆ ನಡೆಸಿ ಆ ಹಣವನ್ನು ವೃದ್ಧೆಯ ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ. ಆದರೆ, ವೃದ್ಧೆ ಜೀವಂತವಾಗಿದ್ದಾಗ ಯಾರೂ ನೋಡಿಕೊಳ್ಳಲಿಲ್ಲ, ಈಗ ಆಕೆ ಭಿಕ್ಷಾಟನೆ ಮಾಡಿ ಗಳಿಸಿದ ಹಣವನ್ನು ಹಂಚಿಕೊಳ್ಳಲು ಬಂದಿದ್ದಾರೆ ಎಂದು ಸಂಬಂಧಿಕರ ಬಗ್ಗೆ ಸಾರ್ವಜನಿಕರು ಬೇಸರ ಹೊರಹಾಕಿದ್ದಾರೆ.






