ಇತರೆ

ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ದಿಢೀರ್ ನಾಪತ್ತೆ!

Views: 71

ಕನ್ನಡ ಕರಾವಳಿ ಸುದ್ದಿ:ರಾಜ್ಯದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರು ನಗರದಿಂದ ದಿಢೀರ್ ನಾಪತ್ತೆಯಾಗಿರುವುದು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ.

ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಳೆದ ಆ.20ರಂದು ತೆರಳಿದ್ದ ಅವರು ಬೆಳಿಗ್ಗೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಬಳಿಕ ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಜ್ಞಾನೇಂದ್ರ ಕುಮಾರ್ ನವದೆಹಲಿಗೆ ತೆರಳಲು ವಿಮಾನದ ಟಿಕೆಟ್ ಬುಕ್ ಮಾಡಿದ್ದರು ಎನ್ನಲಾಗಿದೆ. ದೆಹಲಿಗೆ ತೆರಳುವುದಾಗಿ ತಿಳಿಸಿ ವಿಮಾನ ನಿಲ್ದಾಣಕ್ಕೆ ಹೋಗಿದ್ದರೂ, ಅಲ್ಲಿಂದ ಅವರು ವಿಮಾನ ಏರಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ವಿಮಾನ ನಿಲ್ದಾಣದವರೆಗೆ ಅವರ ಚಲನವಲನವನ್ನು ಪೊಲೀಸರು ಟ್ರ್ಯಾಕ್ ಮಾಡಿದ್ದು, ಬಳಿಕ ಮೊಬೈಲ್ ಸಂಪರ್ಕ ಕಡಿತಗೊಂಡಿದೆ.

ಜ್ಞಾನೇಂದ್ರ ಕುಮಾರ್ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುವ ಹಿನ್ನೆಲೆಯಲ್ಲಿ ನವದೆಹಲಿ ಕಡೆಗೆ ತೆರಳಿರುವ ಸಾಧ್ಯತೆಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಆದರೆ, ಅವರ ಕುಟುಂಬದವರ ಸಂಪರ್ಕಕ್ಕೂ ಅಧಿಕಾರಿ ಸಿಗದಿರುವುದು ಆತಂಕಕ್ಕೆ ಕಾರಣವಾಗಿದೆ.

ಜ್ಞಾನೇಂದ್ರ ಕುಮಾರ್ ಅವರಿಗೆ ಈ ಹಿಂದೆ ಆರೋಗ್ಯ ಸಮಸ್ಯೆ ಇತ್ತು ಎಂಬ ಮಾಹಿತಿಯೂ ಲಭ್ಯವಾಗಿದೆ. ಸದ್ಯ ಅವರು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್ ಎಂಇ) ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್ ಸಿ) ಸೇವೆ ಸಲ್ಲಿಸಿದ್ದರು.

ವಿಮಾನ ನಿಲ್ದಾಣದದಿಂದ ಅವರು ಎಲ್ಲಿಗೆ ತೆರಳಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ. ವಿಮಾನ ನಿಲ್ದಾಣದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳು ಸೇರಿದಂತೆ ಲಭ್ಯವಿರುವ ಮಾಹಿತಿಯನ್ನು ಪರಿಶೀಲಿಸಲಾಗುತ್ತಿದೆ.

ಅಧಿಕಾರಿಯ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದು, ಅವರ ನಾಪತ್ತೆಯ ಹಿಂದಿನ ನಿಖರ ಕಾರಣ ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ.

Related Articles

Back to top button
error: Content is protected !!